ಈಡಿಗ ಸಮಾಜದ ಭವಿಷ್ಯಕ್ಕಾಗಿ: ಪ್ರಣವಾನಂದ ಸ್ವಾಮೀಜಿ

ಚಿತ್ತಾಪುರ: ಈಡಿಗ, ಬಿಲ್ಲವ, ನಾಮಧಾರಿ, ದೀವರು, ತೀಯ ಸೇರಿದಂತೆ 26 ಪಂಗಡಗಳ ಬೇಡಿಕೆಗಳನ್ನು ಕೂಡಲೇ ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯ ಸ್ಪಂದಿಸಿ ಈಡೇರಿಸಬೇಕು. ಇಲ್ಲದಿದ್ದರೆ ಪಾದಯಾತ್ರೆ ಇಂದು ಆರಂಭ ವಾಗಿದ್ದು ಮುಂದೆ ಪಾದಯಾತ್ರೆ ಬಹುರೂಪ ಪಡೆದುಕೊಳ್ಳುವುದನ್ನು ಎದುರಿಸಬೇಕಾದಿತು ಎಂದು ಉಡುಪಿ-ಚಿಕ್ಕಮಂಗಳೂರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪಕ್ಕೆ ಈಡಿಗ ಸಮಾಜದ ಬೇಡಿಕೆಗಳ ಈಡೇರಿಕೆಗಾಗಿ ಹಮ್ಮಿಕೊಂಡ ಪಾದಯಾತ್ರೆ ಮಂಗಳವಾರ ತಲುಪಿದ್ದಂತೆ ಸಮಾಜದವರು ಬರಮಾಡಿಕೊಂಡು ಐತಿಹಾಸಿಕ ಪಾದಯಾತ್ರೆಯ ಸಮಾಜ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಡಿಗ ಸಮಾಜದ ಜನರು ಶೋಷಿತರು, ತುಳಿತಕ್ಕೆ ಒಳಗಾದವರು ಶೇ. 90 ರಷ್ಟು ಬಡವರಿದ್ದಾರೆ ಎಂದರು.
ರಾಜ್ಯದ ಸಿಎಂ ಅವರು ಕೂಡಲೇ ಸ್ಪಂದನೆ ಮಾಡಿ ಪಾದಯಾತ್ರೆಕೈಗೊಳ್ಳುತ್ತಿರುವ ಪ್ರಣವಾನಂದ ಸ್ವಾಮಿ ಹಾಗೂ ಇತರರನ್ನು ಭೇಟಿ ಮಾಡಿ ವಿಧಾನಸೌಧಕ್ಕೆ ಕರೆಸಿ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಬೇಕೆಂದರು.
ಕರದಾಳ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಥದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಪಾದಯಾತ್ರೆ ಮಾಡುತ್ತಿರುವುದು ಈಡಿಗ ಸಮಾಜದ ಭವಿಷ್ಯಕ್ಕಾಗಿ. ಆದರೆ ಕೆಲವರು ರಾಜಕೀಯ ಒತ್ತಡದಿಂದ ಈಡಿಗ ಸಮುದಾಯದಲ್ಲಿ ಗೊಂದಲ ಮೂಡಿಸಿ ಒಡಕು ಉಂಟು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಪಾದಯಾತ್ರೆಗೆ ಬರದಂತೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಾದಯಾತ್ರೆ ಶಾಂತಿಯುತವಾಗಿ ನಡೆಯತ್ತದೆ. ಸುಮಾರು ಐದಾರು ಬೇಡಿಕೆಗಳನ್ನು ಈಡೇರಿಸಿದರೆ ಚರ್ಚೆ ಮಾಡಲು ಯೋಚನೆ ಮಾಡಬಹುದು. ಯಾವುದೇ ಕಾರಣಕ್ಕೆ ಪಾದಯಾತ್ರೆ ನಿಲ್ಲಲ್ಲ. 41 ದಿನ ಪಾದಯಾತ್ರೆ ನಡೆಸಿ ಬೆಂಗಳೂರಿಗೆ ತಲುಪಿದ ಮೇಲೆ ಬೇಡಿಕೆ ಈಡೇರುವವರೆಗೂ ಬೃಹತ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.
ಚಿತ್ರದುರ್ಗ ಛಲವಾದಿ ಜಗದ್ಗುರು ಬಸವನಾಗಿದೇವ ಶರಣರು, ಮಾಜಿ ಎಂಎಲ್‌ಸಿ ಎಚ್‌ಆರ್ ಶ್ರೀನಾಥ ದಣಿಗಳು, ಕೆಪಿಎಸ್ಸಿ ಮಾಜಿ ಸದಸ್ಯ ಡಾ. ಲಕ್ಷ್ಮಿನರಸಯ್ಯ ತುಮಕೂರು, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ಮಾದ್ಯಮ ಸಂಚಾಲಕ ಡಾ. ಸದಾನಂದ ಪೆರ್ಲ ಮಾತನಾಡಿದರು.
ಉಪ್ಪಾರ ಗುರುಪೀಠದ ಶ್ರೀ ಜಗದ್ಗುರು ಭಗೀರಥಾನಂದಪುರಿ, ಸುಲೆಪೇಟ್ ವಿಶ್ವಕರ್ಮ ಏಕದಂಡಗಿ ಮಠ ಶ್ರೀ ದೊಡ್ಡಂದ್ರ ಸ್ವಾಮಿ, ಈಡಿಗ ಸಮಾಜದ ರಾಜ್ಯ ಮಹಿಳಾ ಅಧ್ಯಕ್ಷೆ ಪೂರ್ಣಿಮಾ ಇಳಗೇರ, ಜಿಪಂ ಮಾಜಿ ಅಧ್ಯಕ್ಷ ನಿತೀನ ಗುತ್ತೆದಾರ, ಪ್ರಮುಖರಾದ ವೆಂಕಟೇಶ್ ಕಡೇಚೂರ್, ಶಿವಯ್ಯ ಗುತ್ತೇದಾರ, ಸುರೇಶ ಗುತ್ತೇದಾರ, ತಿಪ್ಪೇಶ್ ಚಿತ್ರದುರ್ಗ, ಡಾ. ಮಂಚೇಗೌಡ, ಸಂತೋಷ ಗುತ್ತೇದಾರ, ವನೀತಾ ಇಳಗೇರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಣ್ಣೂರಕರ್, ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ಅಯ್ಯಪ್ಪ ರಾಮತೀರ್ಥ ಸೇರಿದಂತೆ ಇತರರಿದ್ದರು.
ಕಲಾವಿದರಾದ ಬಸಯ್ಯ ಗುತ್ತೇದಾರ, ರಮೇಶ ಗುತ್ತೇದಾರ ಸಂಗೀತ ಸೇವೆ ಸಲ್ಲಿಸಿದರು. ಕಾಶಿನಾಥ ಗುತ್ತೇದಾರ ನಿರೂಪಣೆ ಮಾಡಿದರು.



