ಅಂಬಿಗರ ಚೌಡಯ್ಯನವರ ಜಯಂತೋತ್ಸವ ಅದ್ದೂರಿಯಾಗಿ ಆಚರಣೆ

“ಅಂಬಿಗರ ಚೌಡಯ್ಯನವರ ಜಯಂತಿಯನ್ನು ಈ ಬಾರಿ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಯಂತಿ ನಿಮಿತ್ತ ಅನ್ನದಾನ, ಬಡ ಮಕ್ಕಳಿಗೆ ಸನ್ಮಾನ ಹಾಗೂ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದೆ,”– ಜಯಪ್ರಕಾಶ ಕಮಕನೂರ,(ಜಯಂತೋತ್ಸವ ಸಮಿತಿ ಅಧ್ಯಕ್ಷ)
ಕಲಬುರಗಿ:ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವವನ್ನು ಜನವರಿ 21ರಂದು ನಗರದಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲು ಕೋಲಿ–ಕಬ್ಬಲಿಗ ಸಮಾಜದ ಮುಖಂಡರು ನಿರ್ಧರಿಸಿದ್ದಾರೆ ಎಂದು ಕೋಲಿ ಸಮಾಜದ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 20ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಿಂದ ಜೀಪ್ ರ್ಯಾಲಿಗೆ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಚಾಲನೆ ನೀಡಲಿದ್ದಾರೆ. ಅದೇ ದಿನ ಸಂಜೆ ಜಗತ್ ವೃತ್ತದಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದ್ದು, ಅಂಬಿಗರ ಚೌಡಯ್ಯನವರ ವಚನ ಸಂಕಲನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.
ಜನವರಿ 21ರಂದು ಬೆಳಗ್ಗೆ 11 ಗಂಟೆಗೆ ನಗರದ ಗಂಜ್ ಪ್ರದೇಶದ ನಗರೇಶ್ವರ ಶಾಲೆ ಸಮೀಪ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ನಡೆಯಲಿದೆ. ನಂತರ ನಾಸಿಕ ಡೋಲ್, ಜನಪದ ಕಲಾ ತಂಡಗಳು, ಹುಲಿ ಕುಣಿತ ಸೇರಿದಂತೆ ವಿವಿಧ ವೇಷಧಾರಿಗಳೊಂದಿಗೆ ಭವ್ಯ ಮೆರವಣಿಗೆ ಡಾ. ಎಸ್.ಎಂ. ಪಂಡಿತ್ ರಂಗಮಂದಿರಕ್ಕೆ ಸಾಗಲಿದೆ. ಅಂಬಿಗರ ಚೌಡಯ್ಯನವರ ಭಾವಚಿತ್ರ ಹಾಗೂ ವಚನ ಗ್ರಂಥ ಹೊತ್ತ ರಥ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಲಿದೆ ಎಂದು ಹೇಳಿದರು.
ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಲ್ಯಾಪ್‌ಟಾಪ್ ಹಾಗೂ ಅಂಗವಿಕಲ ಮಕ್ಕಳಿಗೆ ತ್ರಿಚಕ್ರ ಸೈಕಲ್ ವಿತರಿಸಲಾಗುವುದು. ಈ ಸಂದರ್ಭದಲ್ಲಿ ಸಚಿವರು, ಶಾಸಕರು ಹಾಗೂ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಯಿಬಣ್ಣ ನೀಲಪ್ಪಗೊಳ, ರವಿರಾಜ್ ಕೊರವಿ, ಬಸವರಾಜ ಬೂದಿಹಾಳ, ರಮೇಶ್ ನಾಟಿಕಾರ್, ಬಸವರಾಜ ಹರವಾಳ, ಶಿವಾನಂದ ಹೊನಗುಂಟಿ, ಲಚ್ಚಪ್ಪ ಜಮಾದಾರ್, ಅಂಬು ಡಿಗ್ರಿ ಬಸವರಾಜ ಗುಂಡಲಗೇರಿ, ಶ್ಯಾಮರಾವ್ ಸುಲ್ತಾನಪುರ, ಶಾಂತಪ್ಪ ಕೂಡಿ, ವಿಜಯಕುಮಾರ್ ಹದಗಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



