KEA CET ನೋಂದಣಿ ತೊಂದರೆ: ವಿದ್ಯಾರ್ಥಿಗಳ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕೆ ಬಿ.ಎಂ. ರಾವೂರ ಆಗ್ರಹ

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ 2026-27ನೇ ಸಾಲಿನ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (CET) ನೋಂದಣಿ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಬೇಕೆಂದು ಆಗ್ರಹಿಸಲಾಗಿದೆ.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಹವ್ಯಾಸಿ ಪ್ರವಾಸಿ ಶಿಕ್ಷಣ ಮಾರ್ಗದರ್ಶಿ ಬಳಗದ ಗೌರವ ಕಾರ್ಯದರ್ಶಿ ಬಿ.ಎಂ. ರಾವೂರ್ ಮಾತನಾಡಿದರು. ಅವರು ಹೇಳುವಂತೆ, CET ಪರೀಕ್ಷೆಗೆ ಜನವರಿ 17ರಿಂದ ಆನ್‌ಲೈನ್ ನೋಂದಣಿ ಆರಂಭವಾಗಿದ್ದು, ಫೆಬ್ರವರಿ 18 ಕೊನೆಯ ದಿನಾಂಕವಾಗಿದೆ. ಈ ಬಾರಿ ಓಟಿಪಿ ಆಧಾರಿತ ಅರ್ಜಿ ವ್ಯವಸ್ಥೆ ಜಾರಿಗೊಂಡಿದ್ದು, ಇದು ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ಉತ್ತಮ ಕ್ರಮವಾಗಿದೆ. ಆದರೆ, ದಾಖಲಾತಿ ಅಪ್ಲೋಡ್ ವೇಳೆ ಅಭ್ಯರ್ಥಿ ಹಾಗೂ ಪೋಷಕರ ಹೆಸರಿನಲ್ಲಿ ಅಕ್ಷರದೋಷ ಕಂಡುಬಂದರೆ ಅರ್ಜಿ ಸ್ವೀಕರಿಸದಿರುವುದು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಪೋಷಕರು ದಾಖಲೆ ತಿದ್ದುಪಡಿಗಾಗಿ ಆಧಾರ್ ಕೇಂದ್ರಗಳು ಹಾಗೂ ಕಂದಾಯ ಇಲಾಖೆಯ ನೆಮ್ಮದಿ ಕೇಂದ್ರಗಳಿಗೆ ದಿನವೂ ಅಲೆದಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ 371(ಜೆ) ಪ್ರಮಾಣ ಪತ್ರ ಪಡೆಯುವಲ್ಲಿ ಕಂದಾಯ ಇಲಾಖೆಯಿಂದ ಅನಗತ್ಯ ದಾಖಲೆಗಳನ್ನು ಕೇಳುತ್ತಿರುವುದು ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಿದೆ ಎಂದು ಅವರು ಆರೋಪಿಸಿದರು.
ವಿದ್ಯಾರ್ಥಿಗಳು ಒಂದೆಡೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ದಾಖಲಾತಿ ತಿದ್ದುಪಡಿ ಮತ್ತು ನೋಂದಣಿ ಸಮಸ್ಯೆಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ SSLC ದಾಖಲಾತಿಗಳ ಆಧಾರದ ಮೇಲೆ CET ಅರ್ಜಿ ಸಲ್ಲಿಸಲು ಅವಕಾಶ ನೀಡಿ, ಫಲಿತಾಂಶದ ನಂತರ ಉಳಿದ ದಾಖಲೆಗಳನ್ನು ತಿದ್ದುಪಡಿ ಮಾಡಲು ಸಮಯ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ಕಲಬುರಗಿ ವಿಭಾಗದಲ್ಲಿ KEA ಸಹಾಯವಾಣಿ ಮತ್ತು ಸಂಪರ್ಕ ಕಚೇರಿ ಆರಂಭಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ಸಮಸ್ಯೆಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, KEA ನಿರ್ದೇಶಕ ಎಚ್. ಪ್ರಸನ್ನ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹವ್ಯಾಸಿ ಪ್ರವಾಸಿ ಶಿಕ್ಷಣ ಮಾರ್ಗದರ್ಶಿ ಬಳಗದ ಗೌರವಾಧ್ಯಕ್ಷ ನಾರಾಯಣ ಜೋಷಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



