ಲೋಕಾಯುಕ್ತ ದಾಳಿ: ತಹಶೀಲ್ದಾರ್ ಕಚೇರಿ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳಲ್ಲಿ ದಾಖಲೆ ಪರಿಶೀಲನೆ

ಜೇವರ್ಗಿ: ಪಟ್ಟಣದ ತಹಶೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ದಾಖಲೆಗಳ ಕೂಲಂಕಷ ಪರಿಶೀಲನೆ ನಡೆಸಿದರು.
ದುರಾಡಳಿತ ಹಾಗೂ ಲಂಚಕ್ಕೆ ಬೇಡಿಕೆ ಆರೋಪಗಳ ಹಿನ್ನೆಲೆ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ನಾಲ್ಕು ತಂಡಗಳು ಹಾಗೂ ಕಲಬುರಗಿ ಲೋಕಾಯುಕ್ತ ಕಚೇರಿಯ ಅಧಿಕಾರಿಗಳನ್ನು ಒಳಗೊಂಡ ಮತ್ತೊಂದು ನಾಲ್ಕು ತಂಡಗಳು ಸೇರಿ ಒಟ್ಟು ಎಂಟು ತಂಡಗಳು ದಾಳಿಯಲ್ಲಿ ಭಾಗವಹಿಸಿದ್ದವು.
ಸಿಂಧುತ್ವ ಪ್ರಮಾಣ ಪತ್ರ, ಮೈನಾರಿಟಿ ಹಾಗೂ ಜಾತಿ ಪ್ರಮಾಣ ಪತ್ರ ಪಡೆಯಲು ಸಲ್ಲಿಸಲಾದ ಅರ್ಜಿಗಳ ವಿಲೇವಾರಿ ಸ್ಥಿತಿ, ನಿಗದಿತ ಕಾಲಮಿತಿಯಲ್ಲಿ ಎಷ್ಟು ಅರ್ಜಿಗಳು ಪೂರ್ಣಗೊಂಡಿವೆ, ಎಷ್ಟು ಅರ್ಜಿಗಳು ಬಾಕಿ ಉಳಿದಿವೆ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು. ಅಲ್ಲದೆ ಪರಿಹಾರವಾಗದೇ ಇರುವ ಸಾರ್ವಜನಿಕರ ಅಹವಾಲುಗಳು, ಕಚೇರಿಯ ಸಿಬ್ಬಂದಿಗಳ ಹಾಜರಾತಿ ವಿವರ, ಬಾಕಿ ಕಡತಗಳು, ಸುದೀರ್ಘ ಕಾಲದಿಂದ ಅರ್ಜಿಗಳು ಬಾಕಿ ಉಳಿಯಲು ಕಾರಣಗಳು, ಹಕ್ಕು ಬದಲಾವಣೆ, ಭೂ ಮಂಜೂರಾತಿ, ಭೂಮಿ ಹಾಗೂ ಬಗರ್ಹುಕುಂ ಪ್ರಕರಣಗಳು, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ವಿಲೇವಾರಿಯಾಗದೇ ಉಳಿದಿರುವ ಅರ್ಜಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಲಾಯಿತು.
ತಹಶೀಲ್ದಾರ್ ಕಚೇರಿ ಮಾತ್ರವಲ್ಲದೆ ಆಹಾರ ಇಲಾಖೆ, ಅಬಕಾರಿ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸರ್ವೆ ಇಲಾಖೆ, ಉಪ ನೊಂದಣಾಧಿಕಾರಿಗಳ ಕಚೇರಿ ಸೇರಿದಂತೆ ಹಲವು ಇಲಾಖೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಅವರು, “ಸಾರ್ವಜನಿಕರಿಗೆ ಅಧಿಕಾರಿಗಳು ಸಕಾಲದಲ್ಲಿ ಕೆಲಸ ಮಾಡಿಕೊಡಬೇಕು. ವಿನಾಕಾರಣ ತೊಂದರೆ ನೀಡಬಾರದು. ಯಾವುದೇ ಹಂತದಲ್ಲಿಯೂ ಅರ್ಜಿಗಳು ಬಾಕಿ ಉಳಿಯಬಾರದು. ಪರಿಶೀಲನೆ ವೇಳೆ ತಪ್ಪಿತಸ್ಥರು ಕಂಡುಬಂದಲ್ಲಿ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಕಚೇರಿಗೆ ವರದಿ ಸಲ್ಲಿಸಲಾಗುವುದು. ಸರ್ಕಾರಿ ಉದ್ಯೋಗ ಎಂದರೆ ಕೇವಲ ಸಹಿ ಹಾಕಿ ವೇತನ ಪಡೆಯುವುದಲ್ಲ; ಗ್ರಾಮೀಣ ಭಾಗದ ಬಡಜನರು ಹಾಗೂ ರೈತರ ಕಷ್ಟಗಳಿಗೆ ಸ್ಪಂದಿಸಬೇಕು” ಎಂದು ಎಚ್ಚರಿಸಿದರು.
ದಾಳಿಯ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಗ್ರೇಡ್–2 ತಹಶೀಲ್ದಾರ್ ಗೋಪಾಲ ಕಪೂರ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತೀಶಕುಮಾರ ಸಂಗನ, ಅಬಕಾರಿ ನಿರೀಕ್ಷಕ ರೇವಣಸಿದ್ದಪ್ಪ ಹೂಗಾರ, ಸಿದ್ದಣ್ಣ ಹುಲಕಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.



