ಕಲಬುರಗಿಜಿಲ್ಲಾಸುದ್ದಿ

ಫೆ.23 ರಂದು ತಳವಾರರಿಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ವಿಳಂಬ ಖಂಡಿಸಿ ಮುತ್ತಿಗೆ ಹಾಕಿ ಪ್ರತಿಭಟನೆ

ಕಲಬುರಗಿ: ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿ ಪ್ರಮಾಣ ಪತ್ರ ನೀಡುವಲ್ಲಿ ನಡೆಯುತ್ತಿರುವ ವಿಳಂಬ ಮತ್ತು ಗೊಂದಲಕಾರಿ ಕ್ರಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘವು ಫೆಬ್ರವರಿ 23ರಂದು ಭಾರೀ ಪ್ರತಿಭಟನೆ ಹಾಗೂ ತಹಸೀಲ್ದಾರರ ಕಚೇರಿಗೆ ಮುತ್ತಿಗೆ ಹಾಕುವ ಹೋರಾಟ ಘೋಷಿಸಿದೆ.

ಸಂಘದ ಅಧ್ಯಕ್ಷ ಸಂತೋಷ ತಳವಾರ ಮಾತನಾಡಿ, ಕರ್ನಾಟಕ ಸರ್ಕಾರ ಪ್ರವರ್ಗ–1ರಲ್ಲಿದ್ದ 88(h) ಅಡಿಯಲ್ಲಿ ಬರುವ ತಳವಾರ ಜಾತಿಯನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಪ್ರಸ್ತಾವನೆ ಸಲ್ಲಿಸಿ, ಕೇಂದ್ರ ಸರ್ಕಾರದ ಅನುಮೋದನೆ, ಸಂಸತ್ತಿನ ಒಪ್ಪಿಗೆ ಹಾಗೂ ರಾಷ್ಟ್ರಪತಿಯವರ ಅಂಕಿತದೊಂದಿಗೆ 20-02-2020ರಂದು ರಾಜ್ಯಪತ್ರ ಹೊರಡಿಸಲಾಗಿದೆ ಎಂದು ಹೇಳಿದರು.

ಅದರಂತೆ ರಾಜ್ಯ ಸರ್ಕಾರವೂ 28-02-2020ರಂದು ಸುತ್ತೋಲೆ ಹಾಗೂ ರಾಜ್ಯಪತ್ರ ಹೊರಡಿಸಿ ತಳವಾರ ಜಾತಿಯನ್ನು ಪರಿಶಿಷ್ಟ ಪಂಗಡ ಕ್ರಮ ಸಂಖ್ಯೆ 38ರ ಗುಂಪಿಗೆ ಸೇರಿಸಿತ್ತು. ನಂತರ 29-10-2022ರ ಆದೇಶದ ಮೂಲಕ ಪ್ರವರ್ಗ–1ರಲ್ಲಿದ್ದ 88(h) ತಳವಾರ ಜಾತಿಯನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಟ್ಟು ಎಸ್‌ಟಿ ಪಟ್ಟಿಗೆ ಸೇರಿಸಲಾಗಿದೆ ಎಂದು ವಿವರಿಸಿದರು.

ಕುಲಶಾಸ್ತ್ರೀಯ ಅಧ್ಯಯನದ ಪ್ರಕಾರ 2010–11ರಲ್ಲಿ ರಾಜ್ಯದಲ್ಲಿ 8.28 ಲಕ್ಷ ತಳವಾರ ಜನಸಂಖ್ಯೆ ಇದ್ದು, ಕಲಬುರಗಿಯಲ್ಲಿ 28,800 ಜನರಿದ್ದರು. ಪ್ರಸ್ತುತ 2025ರಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಈ ಸಂಖ್ಯೆ 2 ಲಕ್ಷಕ್ಕೂ ಅಧಿಕವಾಗಿರಬಹುದೆಂದು ಅಂದಾಜಿಸಲಾಗಿದೆ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ತಳವಾರರಿಗೆ ಸುಲಭವಾಗಿ ಎಸ್‌ಟಿ ಪ್ರಮಾಣ ಪತ್ರ ದೊರೆಯುತ್ತಿದ್ದರೆ, ಈಗಿನ ಸರ್ಕಾರ ಒಂದೇ ತಳವಾರ ಜಾತಿಯನ್ನು ಮೂರು ಭಾಗಗಳಾಗಿ ವಿಭಜಿಸಿ ಗೊಂದಲ ಸೃಷ್ಟಿಸುತ್ತಿದೆ. ಇದರಿಂದ ಸಮುದಾಯಕ್ಕೆ ತೀವ್ರ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು.

ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಸ್‌ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆಯಾದರೂ, ಕಲಬುರಗಿಯಲ್ಲಿ ಕಳೆದ 9 ತಿಂಗಳಿಂದ ಜಾತಿ ಮತ್ತು ನೌಕರರಿಗೆ ಸಿಂಧುತ್ವ ಪ್ರಮಾಣ ಪತ್ರ ತಡೆಹಿಡಿಯಲಾಗಿದೆ. ಇದು ಸಂವಿಧಾನಬಾಹಿರ ಕ್ರಮವಾಗಿದ್ದು, ಉಸ್ತುವಾರಿ ಸಚಿವರ ಮೌಖಿಕ ಸೂಚನೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತಪಡಿಸಿದರು.

ಈ ಅನ್ಯಾಯವನ್ನು ಖಂಡಿಸಿ ಹಾಗೂ ತಕ್ಷಣ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ, ಫೆಬ್ರವರಿ 23ರಂದು ಬೆಳಿಗ್ಗೆ 10 ಗಂಟೆಗೆ ಅಫಜಲಪೂರದ ಶ್ರೀ ಬಸವೇಶ್ವರ ವೃತ್ತದಿಂದ ಭಾರೀ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಘೋಷಿಸಿದರು.

ಅಫಜಲಪೂರ ತಾಲೂಕಿನ ವಿವಿಧ ಗ್ರಾಮಗಳ ತಳವಾರ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಸಂಘ ಮನವಿ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button