ಕೆಲಸ ಒದಗಿಸದಿದ್ದರೆ ವಲಸೆ ಖಚಿತ: ಹೊಡಲ ಗ್ರಾಮದ ಕೂಲಿಕಾರರ ಧರಣಿ ಸತ್ಯಾಗ್ರಹ

ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಶ್ರೀಚಂದ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಹೊಡಲ ಗ್ರಾಮದ ಬಡ ಕೃಷಿ ಕೂಲಿಕಾರರು ಕೆಲಸವಿಲ್ಲದೆ ಜೀವನ ಸಾಗಿಸಲು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಉದ್ಯೋಗ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಎದುರು ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಕೂಲಿಕಾರರಿಗೆ ತಕ್ಷಣ ಕೆಲಸ ಒದಗಿಸದಿದ್ದಲ್ಲಿ ಬಡ ಕುಟುಂಬಗಳು ಹೊಟ್ಟೆಪಾಡಿಗಾಗಿ ವಲಸೆ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಈ ಹಿನ್ನೆಲೆಯಲ್ಲಿ ಕೂಡಲೇ ಫಾರಂ ನಂ.6 ಪಡೆದು ಒಂದು ವಾರದೊಳಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಧರಣಿ ಸತ್ಯಾಗ್ರಹದ ನಂತರ ಪ್ರತಿಭಟನಾಕಾರರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷೆ ಜಯಶ್ರೀ ಎಂ. ಕಟ್ಟಿಮನಿ, ತಾಲ್ಲೂಕ ಅಧ್ಯಕ್ಷ ಮಲ್ಲಪ್ಪ ಮುನ್ನಳ್ಳಿ, ಉಪಾಧ್ಯಕ್ಷೆ ಸಾವಿತ್ರಿ ಲಕ್ಷ್ಮಣ, ಹೊಡಲ ಗ್ರಾಮ ಘಟಕದ ಅಧ್ಯಕ್ಷ ಶ್ರೀಪತಿ ಹೊಡಲ, ಕಾರ್ಯದರ್ಶಿ ಈಟಾಬಾಯಿ ಸೇರಿದಂತೆ ಹಲವಾರು ಕಾರ್ಯಕರ್ತರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.



