“ಅಪ್ಪಾಜಿ ಗುರುಕುಲ ಶಾಲೆಯಲ್ಲಿ ವಿಜ್ಞಾನ–ಜನಪದ ವಸ್ತುಪ್ರದರ್ಶನಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ”
ಮಕ್ಕಳ ವಿಜ್ಞಾನ ಮತ್ತು ಜನಪದ ವಸ್ತು ಪ್ರದರ್ಶನ ನೋಡಿ ಕಣ್ತುಂಬಿ ಕೊಂಡ ಪಾಲಕರು

ಕಲಬುರಗಿ: ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮತ್ತು ಜನಪದ ವಸ್ತು ಪ್ರದರ್ಶನವು ಭವ್ಯವಾಗಿ ಜರುಗಿದ್ದು, ದಕ್ಷಿಣ ಮತಕ್ಷೇತ್ರದ ಮಾನ್ಯ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು, “ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ವಿಜ್ಞಾನ ವಸ್ತುಪ್ರದರ್ಶನಗಳು ಮತ್ತು ಜನಪದ ಕಲೆ–ಸಂಸ್ಕೃತಿಯ ಅರಿವು ಬಹಳ ಅಗತ್ಯ. ಅಪ್ಪಾಜಿ ಗುರುಕುಲ ಶಾಲೆ ಇಂತಹ ಕಾರ್ಯಕ್ರಮಗಳ ಮೂಲಕ ಇಡೀ ಜಿಲ್ಲೆಗೆ ಮಾದರಿಯಾಗಿದೆ” ಎಂದು ಶ್ಲಾಘಿಸಿದರು. ಪಾಲಕರು ಮಕ್ಕಳಿಗೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೆ ಸಾನಿಧ್ಯ ವಹಿಸಿದ ಶ್ರೀನಿವಾಸ್ ಸರಡಗಿ ಪರಮಪೂಜ್ಯ ರೇವಣಸಿದ್ದ ಶಿವಾಚಾರ್ಯರು ಮಾತನಾಡಿ, “ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಅವಶ್ಯ. ಅಪ್ಪಾಜಿ ಗುರುಕುಲ ಶಾಲೆ ಈ ನಿಟ್ಟಿನಲ್ಲಿ ಮಾದರಿ ಸಂಸ್ಥೆ” ಎಂದು ಪ್ರಶಂಸಿಸಿದರು.
ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಅವರು ಮಾತನಾಡಿ, “ಮಕ್ಕಳು ಚಿಗುರುಗಳಂತೆ. ಶಿಕ್ಷಕರು, ಪಾಲಕರು ಹೇಗೆ ಸಾಕ್ಷರ ಯೋಜನೆಯೊಂದಿಗೆ ಬೆಳೆಸುತ್ತಾರೋ ಹಾಗೆಯೇ ಅವರ ಭವಿಷ್ಯ ರೂಪುಗೊಳ್ಳುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಥೆಯ ಸಂಸ್ಥಾಪಕ-ಕಾರ್ಯದರ್ಶಿ ರಾಜಕುಮಾರ್ ಬಿ. ಉದನೂರ ಅವರು ಸ್ವಾಗತ ಭಾಷಣ ನಡೆಸಿದರು.
ಇದೇ ಸಂದರ್ಭದಲ್ಲಿ ಯುನೈಟೆಡ್ ಆಸ್ಪತ್ರೆ ಮತ್ತು ಸಿದ್ಧರಾಮೇಶ್ವರ ಕಣ್ಣಿನ ಆಸ್ಪತ್ರೆ ವತಿಯಿಂದ ಆರೋಗ್ಯ ಮತ್ತು ನೇತ್ರ ತಪಾಸಣೆ ಶಿಬಿರ ನಡೆಯಿತು. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ತಪಾಸಣೆ ಮಾಡಿಸಿಕೊಂಡರು.
ಮಕ್ಕಳು ವಿಜ್ಞಾನ ಮಾದರಿ, ಜನಪದ ವಸ್ತುಗಳು ಹಾಗೂ ವೇಷಭೂಷಣ ಪ್ರದರ್ಶನದಲ್ಲಿ ತಮ್ಮ ಕೌಶಲ್ಯವನ್ನು ತೋರಿಸಿ ಪಾಲಕರು ಹಾಗೂ ಅತಿಥಿಗಳ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮವನ್ನು 9ನೇ ತರಗತಿಯ ವಿದ್ಯಾರ್ಥಿನಿ ಅರ್ಚನಾ ನಿರೂಪಿಸಿದರು. ಶಂಭಾವಿಯವರು ಪ್ರಾರ್ಥನೆ ಗೀತೆ ಹಾಗೂ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಶರಣರಾಜ್ ಚಪ್ಪರಬಂದಿ, ಡಾ. ಸಿದ್ದಲಿಂಗ ರೆಡ್ಡಿ, ಡಾ. ವಿಜಯ ಪಾಟೀಲ್, ಸಂಸ್ಥೆಯ ಅಧ್ಯಕ್ಷೆ ಭಾಗಮ್ಮ ರಾಜಕುಮಾರ್ ಸೇರಿದಂತೆ ಸಿಬ್ಬಂದಿ ಹಾಗೂ ಶಿಕ್ಷಕರು – ಅಭಿಲಾಶ, ಸಾವಿತ್ರಿ, ಅರ್ಚನಾ, ಭಾಗ್ಯಶ್ರೀ, ಅಶ್ವಿನಿ, ದೀಪಾಲಿ, ಶಾಂತಾ, ಲತಾ, ವೈಷ್ಣವಿ, ರಾಹುಲ್ ಮತ್ತು ಶಶಿಕಲಾ ಹಾಜರಿದ್ದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊಳೆಯಿಸಿದ ಸಾರ್ಥಕ ಕಾರ್ಯಕ್ರಮ ಸಮಗ್ರ ಪ್ರಶಂಸೆಗೆ ಪಾತ್ರವಾಯಿತು.



