ಜಿಲ್ಲಾಸುದ್ದಿಯಾದಗಿರಿ

“ಹಾಲಗೇರಾ ಐತಿಹಾಸಿಕ ದಸರಾ ಸಮಾರೋಪ – ಯಲ್ಲಮ್ಮದೇವಿ ಪಲ್ಲಕ್ಕಿ ಉತ್ಸವ, ಸರಪಳಿ ಹರಿಯುವಿಕೆಯಿಂದ ಅದ್ದೂರಿ ತೆರೆ”

"ಹಾಲಗೇರಾ ದಸರಾ ಅದ್ದೂರಿ ಸಮಾರೋಪ"

ಯಾದಗಿರಿ:ವಡಗೇರಾ ತಾಲೂಕಿನ ದೇವರ ಹಾಲಗೇರಾ ಗ್ರಾಮದ ಐತಿಹಾಸಿಕ ದಸರಾ ಹಬ್ಬವು ಹತ್ತು ದಿನಗಳ ಭಕ್ತಿ, ಭಾವನೆ ಮತ್ತು ಸಂಭ್ರಮದ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.

ಘಂಟೆ, ಜಾಗಟೆ, ಡೊಳ್ಳು, ಭಜಂತ್ರಿ ನಾದದೊಂದಿಗೆ ಆರಂಭವಾದ ಹಬ್ಬವು ಸಾವಿರಾರು ಭಕ್ತರ ಮಧ್ಯೆ ಶ್ರದ್ಧಾಭಕ್ತಿಯಿಂದ ಜರುಗಿತು. ವಿಜಯದಶಮಿ ದಿನ ಶ್ರೀ ಯಲ್ಲಮ್ಮದೇವಿ ಉತ್ಸವ ಮೂರ್ತಿಯ ಪಲ್ಲಕ್ಕಿ ಹೊರಬಂದು, ಗ್ರಾಮ ಸಿದ್ದೇಶ್ವರ, ಮೈಲಾರಲಿಂಗೇಶ್ವರ, ಹನುಮಾನ್ ಹಾಗೂ ಅಂಬಾಭವಾನಿ ದೇವಸ್ಥಾನಗಳ ಉತ್ಸವ ಮೂರ್ತಿಗಳ ಪಲ್ಲಕ್ಕಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಸರಪಳಿ ಹರಿಯುವಿಕೆ ಮತ್ತು ಬನ್ನಿ ಸಂಪ್ರದಾಯ
ಶುಕ್ರವಾರ ಬೆಳಗ್ಗೆ ಗ್ರಾಮದ ಹನುಮಾನ್ ದೇವಾಲಯ ಆವರಣದಲ್ಲಿ ಪೂಜಾರಿಗಳಿಂದ ಸರಪಳಿ ಹರಿಯುವಿಕೆ ನೆರವೇರಿತು. ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಎಲ್ಲ ಸಮುದಾಯಗಳು ಒಂದಾಗಿ ಬನ್ನಿ ಮಹಾಕಾಳಿಗೆ ಪೂಜೆ ಸಲ್ಲಿಸಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು. ಜಾತಿ, ಮತ, ಪಂಥ, ಭೇದ ಮರೆತು ಒಗ್ಗಟ್ಟಿನ ಸಂಕೇತವಾಗಿ ಈ ಸಂಪ್ರದಾಯವನ್ನು ಗ್ರಾಮಸ್ಥರು ಪಾಲಿಸಿಕೊಂಡು ಬರುತ್ತಿದ್ದಾರೆ.

ಗ್ರಾಮದ ವೈಶಿಷ್ಟ್ಯ
ಗ್ರಾಮದ ಶೇಕಡಾ 80ರಷ್ಟು ಮನೆಗಳಲ್ಲಿ ದೇವರ ಮೂರ್ತಿಯಿರುವುದರಿಂದ ಹಾಲಗೇರಾ ಸುತ್ತಮುತ್ತಲಿನ ನೂರು ಹಳ್ಳಿಗಳಲ್ಲಿ ಪ್ರಸಿದ್ಧಿ ಪಡೆದಿದೆ. ಪ್ರತಿಯೊಂದು ಸಮುದಾಯವೂ ಹಬ್ಬದ ಕಾರ್ಯಗಳಲ್ಲಿ ಪಾಲ್ಗೊಂಡು ದಸರಾ ವೈಭವಕ್ಕೆ ಕಳೆ ತಂದವು.

ಈ ದಸರಾ ಸಂಭ್ರಮದಲ್ಲಿ ದೊಡಪ್ಪ ಮುತ್ಯಾ, ಪರಪ್ಪ ಮುತ್ಯಾ, ಹನುಮೇಗೌಡ ಬಿರನಕಲ್, ಬಸ್ಸುಗೌಡ ಬಿಳ್ಹಾರ, ಡಾ. ಉಮೇಶ ಮುದ್ನಾಳ, ಮಲ್ಲಣ್ಣ ಮಾಲಿಪಾಟೀಲ, ಚಂದ್ರುಗೌಡ ಹಾಲಗೇರಾ, ನರಸರಡ್ಡಿ ದೇಸಾಯಿ, ಬಾಪುಗೌಡ ಪೊಲೀಸ್ ಪಾಟೀಲ, ಮಲ್ಲಣಗೌಡ ಕೆಳಮನಿ, ಭೀಮರಾಯ ನಾಟೇಕಾರ, ಹುಸೇನ್‌ಸಾಬ ನಾಶಿ, ಸಂಗಪ್ಪ ಕರಡಿ, ಅಯ್ಯಣ್ಣ ಜೇರಬಂಡಿ, ರೆಡ್ಡೆಪ್ಪ ನಾಟೇಕಾರ, ರಾಜಶೇಖರ ಕಲ್ಮನಿ ಸೇರಿದಂತೆ ಹಲವರು ಭಾಗವಹಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ದೇವರ ಹಾಲಗೇರಾ ದಸರಾ ಹಬ್ಬವು ನಾಡ ಸಂಸ್ಕೃತಿಯ ಪ್ರತೀಕವಾಗಿ, ಒಗ್ಗಟ್ಟು ಮತ್ತು ಭಕ್ತಿಭಾವದೊಂದಿಗೆ ಪರಂಪರೆಯಂತೆ ಈ ಬಾರಿಯೂ ಸಂಪನ್ನವಾಯಿತು.

Related Articles

Leave a Reply

Your email address will not be published. Required fields are marked *

Back to top button