ಆರ್‌ಎಸ್‌ಎಸ್ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ – ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ

ಕಲಬುರಗಿ: ಸರ್ಕಾರಿ ಪ್ರದೇಶದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದ ಹಿನ್ನೆಲೆಯಲ್ಲಿ, ಸಚಿವರಿಗೆ ಅಶ್ಲೀಲ ಪದಗಳಿಂದ ಅವಮಾನಿಸಿ ಕೊಲೆ ಬೆದರಿಕೆ ಹಾಕಿದ ಘಟನೆಯನ್ನು ಖಂಡಿಸಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಟೈರಿಗೆ ಬೆಂಕಿ ಹಚ್ಚಿ ರಸ್ತೆ ತಡೆದು ಘೋಷಣೆ ಕೂಗಿದರು. “ಆರ್‌ಎಸ್‌ಎಸ್ ಧಿಕ್ಕಾರ,” “ಸಂವಿಧಾನ ರಕ್ಷಿಸಿ,” “ಪ್ರಿಯಾಂಕ್ ಖರ್ಗೆ ನಮ್ಮ ಹೆಮ್ಮೆ” ಎಂಬ ಘೋಷಣೆಗಳೊಂದಿಗೆ ಅವರು ಪ್ರತಿಭಟನೆ ನಡೆಸಿದರು.
ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಕೀಲ್ ಅಹಮದ್ ಸರಡಗಿ ಮಾತನಾಡಿ, “ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಂದಿರುವ ಬೆದರಿಕೆ ಕರೆಗಳ ಪೋನ್ ನಂಬರ್‌ಗಳನ್ನು ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜನರ ಧ್ವನಿಯನ್ನು ಪ್ರತಿಬಿಂಬಿಸುವ ನಾಯಕರನ್ನು ಬೆದರಿಸುವ ಧೈರ್ಯ ಯಾರಿಗೂ ಇರಬಾರದು,” ಎಂದು ಆಗ್ರಹಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಪ್ರವೀಣ್ ಪಾಟೀಲ್ ಹರವಾಳ, ಡಾ. ಕಿರಣ ದೇಶಮುಖ್, ಫಾರೂಕ್ ಮಾನಿಯಾಳ, ರಾಜೀವ್ ಜಾನೆ, ಶಿವಾನಂದ ಹೊನಗುಂಟಿ, ಈರಣ್ಣ ಪಾಟೀಲ್ ಝಳಕಿ, ಓವೈಸ್ ಶೇಖ್, ಕುಸರೋ ಜಾಗಿರದಾರ, ಪ್ರಕಾಶ ಕಪನೂರ್, ರೇಣುಕಾ ಸಿಂಗೆ, ದಿನೇಶ ದೊಡ್ಡಮನಿ, ದೇವೇಂದ್ರ ಸಿನ್ನೂರ್, ಅಶ್ವಿನ್ ಸಂಕಾ, ಶೇಖ ಸಮರಿನ್ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.