ಆಶ್ರಯ ಕಾಲೋನಿಗೆ ಹಕ್ಕುಪತ್ರ ನೀಡುವಂತೆ ಡಿಸಿ ಕಚೇರಿ ಮುಂದೆ ಪ್ರತಿಭಟನೆ
ರಸ್ತೆ–ನೀರು–ವಿದ್ಯುತ್ ಇಲ್ಲದೆ 10 ವರ್ಷ ಸಂಕಷ್ಟ

ಕಲಬುರಗಿ: ರಸ್ತೆ ಇಲ್ಲ, ಕುಡಿಯುವ ನೀರು ಇಲ್ಲ, ವಿದ್ಯುತ್ ಸೌಲಭ್ಯವೂ ಇಲ್ಲ – ಇನ್ನೆಷ್ಟು ನಿರ್ಲಕ್ಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ ತಾಲ್ಲೂಕಿನ ಕೆಸರಟಗಿ ಗ್ರಾಮದ ಸಮೀಪದ ಆಶ್ರಯ ಕಾಲೋನಿ ನಿವಾಸಿಗಳು ಹಕ್ಕುಪತ್ರ ವಿತರಣೆ ಹಾಗೂ ಮೂಲಭೂತ ಸೌಲಭ್ಯಗಳ ಒದಗಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಿಟಿಜನ್ಸ್ ಫೋರಂ ಫಾರ್ ಪೀಸ್ ಅಂಡ್ ಜಸ್ಟೀಸ್ ಸಂಘಟನೆಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಸುಮಾರು 102 ಮನೆಗಳಲ್ಲಿ ವಾಸಿಸುವ 492 ಮಂದಿ ಕಳೆದ ಹತ್ತು ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಯಿತು. ಹಾಳಾಗಿದ್ದ ಮನೆಗಳನ್ನು ಸ್ವಂತ ಖರ್ಚಿನಲ್ಲಿ ದುರಸ್ತಿ ಮಾಡಿಕೊಂಡು ವಾಸಿಸುತ್ತಿದ್ದರೂ, ಇಂದಿಗೂ ಹಕ್ಕುಪತ್ರ ವಿತರಣೆ ಆಗಿಲ್ಲ ಎಂದು ನಿವಾಸಿಗಳು ದೂರಿದರು.
ಮನೆಗಳಿಗೆ ಅಧಿಕೃತ ಸಂಖ್ಯೆ ಇಲ್ಲದ ಕಾರಣ ಜನನ ಹಾಗೂ ಮರಣ ಪ್ರಮಾಣಪತ್ರ ಪಡೆಯಲು ತೊಂದರೆಯಾಗುತ್ತಿದೆ. ಸಂಪರ್ಕ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳ ಕೊರತೆಯಿಂದ ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಈ ಹಿನ್ನೆಲೆಯಲ್ಲಿ ಆಶ್ರಯ ಕಾಲೋನಿ ನಿವಾಸಿಗಳು ತಕ್ಷಣ ಹಕ್ಕುಪತ್ರ ನೀಡುವುದು ಸೇರಿದಂತೆ ಅಗತ್ಯ ನಾಗರಿಕ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು. ಸಂಘಟನೆಯೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಸಂಚಾಲಕ ಎಂ.ಬಿ. ಸಜ್ಜನ್, ಶರಣಬಸಪ್ಪ ಮಮಶೆಟ್ಟಿ, ದೇವು ಬಿರಾದಾರ, ಜಾವೀದ್ ಹುಸೇನ್, ನಾಗಯ್ಯ ಸ್ವಾಮಿ, ಅಶ್ವಿನಿ, ಸೈಯದ್ ಹುಸೇನ್, ಮೋಹನ್ ಸೇರಿದಂತೆ ಹಲವರು ಭಾಗವಹಿಸಿದ್ದರು.



