ಧಾರ್ಮಿಕ ಭಾವನೆಗಳಿಗೆ ದಕ್ಕೆ, ಯುವಕನ ಬಂದನ

ಜೇವರ್ಗಿ : ಇಸ್ಲಾಂ ಧರ್ಮದ ಪವಿತ್ರ ಸ್ಥಳವಾಗಿರುವ ಮೆಕ್ಕಾದ ಕಾಬಾದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹಾಗೂ ಭಗವಾಧ್ವಜವನ್ನು ಎಡಿಟ್ ಮಾಡಿದ ಫೋಟೋವೊಂದನ್ನು ವೈರಲ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯ ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ ಆನಂದ ಗುತ್ತೇದಾರ್(22) ಬಂಧಿತ ಆರೋಪಿಯಾಗಿದ್ದಾನೆ.
ಯುವಕ ಆನಂದ ಗುತ್ತೇದಾರ್ ತನ್ನ ಇನಸ್ಟಾಗ್ರಾಮ್ ಖಾತೆಯಲ್ಲಿ ಕಾಬಾದ ಮೇಲೆ ಭಗವಾಧ್ವಜ ಹಿಡಿದಿರುವ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಫೋಟೋವನ್ನು ಎಡಿಟ್ ಮಾಡಿ ವಿಕೃತಿ ಮೆರೆದಿದ್ದಾನೆ. ಜೇವರ್ಗಿ ತಾಲ್ಲೂಕಿನ ಟಿಪ್ಪುಸುಲ್ತಾನ್ ಸಮಿತಿ ಹಾಗೂ ಅದರ್ಶ ಗ್ರಾಮ ಸಮಿತಿ ಯಾಳವಾರ ಸಂಘಟನೆಗಳ ಮುಖಂಡರು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಸಗಿರುವ ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಯುವಕನ ಹಿಂದೆ ಇರುವ ಶಕ್ತಿಗಳನ್ನು ಪತ್ತೆ ಹಚ್ಚಬೇಕೆಂದು ಅವರು ಆಗ್ರಹಿಸಿದ್ದಾರೆ.
ಪ್ರತಿಭಟನಕಾರರಾದ ಟಿಪ್ಪು ಸುಲ್ತಾನ್ ಸಮಿತಿಯ ಅಧ್ಯಕ್ಷರಾದ ಮೊಹಿಯುದ್ದೀನ್ ಇನಾಂದಾರ್, ಇಬ್ರಾಹಿಂ ಪಟೇಲ್ ಯಾಳವಾರ, ಸದ್ದಾಂ ಹುಸೇನ್, ನಿಸಾರ್ ಇನಾಂದಾರ್, ಸೈಯದ್ ನಾಸಿರ್ ಹಾಗೂ ಇಜೇರಿ ಮತ್ತು ಜೇವರ್ಗಿ ಪಟ್ಟಣದ ಯುವಕರು ಸೇರಿ, ಜೇವರ್ಗಿ ಪೊಲೀಸ್ ಠಾಣೆಗೆ ತೆರಳಿ, ಸ್ವಯಂ ಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶನಿವಾರ ರಾತ್ರಿ ಒತ್ತಾಯಿಸಿದ್ದರು.
ಸಯ್ಯದ್ ಪಟೇಲ್ ಎಂಬುವವರು ನೀಡಿದ ದೂರಿನ ಮೇರೆಗೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ