ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಅಳವಡಿಸಿದ್ದ ಕೇಸರಿ ಧ್ವಜ ತೆರವು:ಬಿಜೆಪಿ ಮುಖಂಡರಿಂದ ಧಿಕ್ಕಾರ ಕೂಗು
ಆರ್.ಎಸ್.ಎಸ್ ಪಥಸಂಚಲನಕ್ಕೆ ಮುನ್ನ ಪುರಸಭೆಯ ಕ್ರಮ

ಚಿತ್ತಾಪುರ : ಚಿತ್ತಾಪುರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ಆಯೋಜಿಸಿರುವ ಸಂಘ ಶತಾಬ್ದಿ ವರ್ಷ ಹಾಗೂ ವಿಜಯದಶಮಿ ಉತ್ಸವದ ಪಥಸಂಚಲನದ ಸಿದ್ಧತೆ ಮಧ್ಯೆ ವಿವಾದ ಉಂಟಾಗಿದೆ.
ಪಥಸಂಚಲನ ಕಾರ್ಯಕ್ರಮ ಅ.19 ರಂದು ಬಜಾಜ್ ಕಲ್ಯಾಣ ಮಂಟಪದಿಂದ ನಡೆಯಲಿದ್ದು, ಅದರ ಅಂಗವಾಗಿ ಅ.16 ರಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೇಲೆ ಕೇಸರಿ ಧ್ವಜ, ಪರಾರಿ, ಬ್ಯಾನರ್ ಮತ್ತು ಭಗವಾಧ್ವಜಗಳನ್ನು ಹಾರಿಸಲಾಗಿತ್ತು.
ಆದರೆ ಅ.17ರ ರಾತ್ರಿ ಪುರಸಭೆ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಧ್ವಜಗಳು ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸಿದ ನಂತರ, ಸ್ಥಳದಲ್ಲಿದ್ದ ಆರ್.ಎಸ್.ಎಸ್ ಹಾಗೂ ಬಿಜೆಪಿ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪುರಸಭೆ ಕ್ರಮವನ್ನು ವಿರೋಧಿಸಿ ಆಡಳಿತದ ವಿರುದ್ಧ “ಧಿಕ್ಕಾರ ಕೂಗಿದರು”.
ಆರ್.ಎಸ್.ಎಸ್ ಕಾರ್ಯಕರ್ತರ ಪ್ರಕಾರ, ಪಥಸಂಚಲನದ ನಿಮಿತ್ತ ಪುರಸಭೆಗೆ ಅಧಿಕೃತವಾಗಿ ಅನುಮತಿ ಪಡೆದು ಶುಲ್ಕ ಪಾವತಿಸಿದ್ದರೂ, ರಾತ್ರೋರಾತ್ರಿ ಧ್ವಜ ತೆರವುಗೊಳಿಸಿರುವುದು ಆಘಾತಕರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯಿಂದ ಅ.19ರಂದು ನಡೆಯಲಿರುವ ಪಥಸಂಚಲನದ ಬಗ್ಗೆ ಸಾರ್ವಜನಿಕರಲ್ಲೂ ಅನುಮಾನ ಉಂಟಾಗಿದೆ.