ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ವಿವಾದ – ನ.5ರಂದು ಮತ್ತೊಂದು ಶಾಂತಿ ಸಭೆ ನಡೆಸುವಂತೆ ಹೈಕೋರ್ಟ್ ಸೂಚನೆ
ಹೈಕೋರ್ಟ್ ಕಲಬುರಗಿ ಪೀಠದ ಆದೇಶ – ನ.7ಕ್ಕೆ ವಿಚಾರಣೆ ಮುಂದೂಡಿಕೆ

ಕಲಬುರಗಿ: ಚಿತ್ತಾಪುರದಲ್ಲಿ ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನದ ಕುರಿತು ಉದ್ಭವಿಸಿರುವ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ನ.5ರಂದು ಮತ್ತೊಂದು ಶಾಂತಿ ಸಭೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠವು ಸೂಚಿಸಿದೆ.
ಈ ಸಂಬಂಧದ ಅರ್ಜಿಯ ವಿಚಾರಣೆ ಗುರುವಾರ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರ ಮುಂದೆ ನಡೆಯಿತು.
ವಿಚಾರಣೆಯ ವೇಳೆ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು, “ಹಿಂದಿನ ಶಾಂತಿ ಸಭೆಯಲ್ಲಿ ಅರ್ಜಿದಾರರು ಪಾಲ್ಗೊಂಡಿರಲಿಲ್ಲ” ಎಂದು ವಾದಿಸಿದರು.
ಆದಕ್ಕೆ ನ್ಯಾಯಮೂರ್ತಿ ಕಮಲ್ ಪ್ರಶ್ನಿಸಿ,“ಶಾಂತಿ ಸಭೆಯ ಗಂಭೀರತೆಯನ್ನು ಅರ್ಜಿದಾರರು ಯಾಕೆ ಅರಿಯಲಿಲ್ಲ? ಅವರ ಪರ ವಕೀಲರು ಸಭೆಗೆ ಯಾಕೆ ಹಾಜರಾಗಿರಲಿಲ್ಲ?” ಎಂದು ಕೇಳಿದರು.
ಇದಕ್ಕೆ ಅರ್ಜಿದಾರರ ಪರ ವಕೀಲ ಅರುಣ ಶಾಮ್, “ಅರ್ಜಿದಾರರ ಸಂಬಂಧಿಕರು ಅಸುನೀಗಿದ ಕಾರಣ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಸಭೆ ಆಯೋಜಿಸಿದರೆ ಅರ್ಜಿದಾರರು ಖಂಡಿತವಾಗಿ ಪಾಲ್ಗೊಳ್ಳುತ್ತಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, “ಇನ್ನೊಂದು ಶಾಂತಿ ಸಭೆ ನಡೆಸಲು ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ” ಎಂದು ಹೇಳಿದರು.
ನಂತರ ನ್ಯಾಯಮೂರ್ತಿ ಕಮಲ್ ಅವರು ನವೆಂಬರ್ 5 ರಂದು ಸಂಜೆ 5 ಗಂಟೆಗೆ ಶಾಂತಿ ಸಭೆ ನಡೆಸಿ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು.
ಹೈಕೋರ್ಟ್ ಸೂಚನೆ ಪ್ರಕಾರ, ಸಭೆಯನ್ನು ಬೆಂಗಳೂರುನಲ್ಲಿ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರ ಕಚೇರಿಯಲ್ಲಿ ನಡೆಸಲಾಗುವುದು.
ಸಭೆಯಲ್ಲಿ ಅರ್ಜಿದಾರರ ಪರ ಹಿರಿಯ ವಕೀಲರು, ಸರ್ಕಾರದ ಪರ ವಕೀಲರು ಹಾಗೂ ಚಿತ್ತಾಪುರ ಜಿಲ್ಲಾಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಈ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 7ಕ್ಕೆ ಮುಂದೂಡಿದೆ.


