ಕೆಂಭಾವಿಯಲ್ಲಿ ಸರ್ವಜ್ಞ ಜಯಂತಿ| ತ್ರಿಪದಿಯಲ್ಲಿ ಮಾನವೀಯ ಮೌಲ್ಯವಿದೆ: ಗುರುಬಸಪ್ಪ ಕುಂಬಾರ

ಕೆಂಭಾವಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸರ್ವಜ್ಞ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗುರು ಬಸಪ್ಪ ಕುಂಬಾರ ಅವರು ಮಾತನಾಡಿ, ಸರ್ವಜ್ಞನ ತ್ರಿಪದಿಗಳು ಸರಳ ಜಾನಪದ ಭಾಷೆಯಲ್ಲಿ ಮಾನವೀಯ ಮೌಲ್ಯಗಳಾದ ಸಮಾನತೆ, ನೈತಿಕತೆ, ದಯೆ ಮತ್ತು ಸಾಮಾಜಿಕ ನ್ಯಾಯವನ್ನು ಸಾರುತ್ತವೆ ಎಂದು ಹೇಳಿದರು.
ಸರ್ವಜ್ಞನ ತ್ರಿಪದಿಗಳು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೀತಿಪಾಠಗಳನ್ನು ಒಳಗೊಂಡಿವೆ. ಜಾತಿ–ಧರ್ಮ ಭೇದವನ್ನು ತಳ್ಳಿಹಾಕಿ ಎಲ್ಲರ ಸಮಾನತೆಯನ್ನು ಒತ್ತಿ ಹೇಳುವ ಅವುಗಳು, ಸಮಾಜದಲ್ಲಿ ಸಾಮರಸ್ಯ ಹಾಗೂ ಆದರ್ಶಮಯ ಬದುಕಿಗೆ ದಾರಿದೀಪವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ದಯೆ, ಧರ್ಮ, ಭಕ್ತಿ, ಶಿಕ್ಷಣ ಹಾಗೂ ಮಾನವೀಯತೆ ಯಂತಹ ಮೌಲ್ಯಗಳನ್ನು ಜೀವನದ ಮಾರ್ಗದರ್ಶಕ ತತ್ವಗಳಾಗಿ ಮಂಡಿಸುವ ಸರ್ವಜ್ಞನ ಕವನಗಳು, ಮೂಢನಂಬಿಕೆಗಳನ್ನು ಟೀಕಿಸಿ ವೈಚಾರಿಕತೆಯನ್ನು ಉತ್ತೇಜಿಸುತ್ತವೆ. ಇಂದಿನ ಯುವಪೀಳಿಗೆ ಸರ್ವಜ್ಞನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಚಪ್ಪ ಎಸ್. ಕುಂಬಾರ್ ಅವರು ಸರ್ವಜ್ಞರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ರೇವಣಸಿದ್ಧ ಕುಂಬಾರ, ಶಿವಪ್ಪ ಕಂಬಾರ್, ಮಲ್ಲಿಕಾರ್ಜುನ್ ಟಕ್ಕಳಕಿ, ಭೀಮಣ್ಣ ಟಕ್ಕಳಕಿ, ರಾಜಶೇಖರ್ ಎಸ್. ಕುಂಬಾರ್, ರವಿ ಕುಂಬಾರ, ಬಸವರಾಜ ಕುಂಬಾರ ಹಂಚಿನಾಳ, ವೀರೇಶ್ ಕುಂಬಾರ, ಮಹೇಶ್ ಕುಂಬಾರ, ಶರಣು ಕುಂಬಾರ, ವಲಿಸಾಬ್, ಶಾಂತಪ್ಪ ಹಾಗೂ ಪುರಸಭೆಯ ಸಿಬ್ಬಂದಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



