ಕಲಬುರಗಿಜಿಲ್ಲಾಸುದ್ದಿ

ಅನುದಾನ ರಹಿತ ಕನ್ನಡ ಶಾಲೆಗಳಿಗೆ ಅನುದಾನ ನೀಡುವಂತೆ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕದ 1995ರ ನಂತರ ಸ್ಥಾಪಿತವಾಗಿರುವ ಎಲ್ಲಾ ಅನುದಾನ ರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ, ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದ ಸಂಘದ ವತಿಯಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಅನಿಲಕುಮಾರ್ ಎನ್. ಡಾಂಗೆ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣದ ಪ್ರಗತಿ ಕುಂಠಿತವಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಭಾಷೆ ವಿವಿಧ ಭಾಷೆಗಳ ಪೈಪೋಟಿಯಿಂದ ಹಿನ್ನಡೆಯಾಗುತ್ತಿದೆ. ಕನ್ನಡವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸರಕಾರ ಮತ್ತು ಶಿಕ್ಷಣ ಇಲಾಖೆ ಆಂಗ್ಲ ಮಾಧ್ಯಮಕ್ಕೆ ಪರಿವರ್ತನೆಗೆ ಅವಕಾಶ ನೀಡಿದರೂ, ಕೆಲ ಅನುದಾನ ರಹಿತ ಶಾಲೆಗಳು ಮಾತೃಭಾಷೆಯ ಮೇಲಿನ ಪ್ರೀತಿ ಮತ್ತು ಬದ್ಧತೆಯಿಂದ ಕನ್ನಡ ಮಾಧ್ಯಮದಲ್ಲಿಯೇ ಬೋಧನೆ ಮುಂದುವರಿಸುತ್ತಿರುವುದು ಶ್ಲಾಘನೀಯವಾಗಿದೆ. ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕೊರತೆಯ ಕಾರಣದಿಂದ ಅವುಗಳನ್ನು ಆಂಗ್ಲ ಮಾಧ್ಯಮಕ್ಕೆ ಪರಿವರ್ತಿಸುತ್ತಿರುವ ಪರಿಸ್ಥಿತಿಯಲ್ಲಿಯೂ ಅನುದಾನ ರಹಿತ ಕನ್ನಡ ಶಾಲೆಗಳು ಕನ್ನಡವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಸಂಘ ತಿಳಿಸಿದೆ.

ಆದರೆ, ಸರಕಾರದ ಉಚಿತ ಯೋಜನೆಗಳು ಮತ್ತು ಶಿಕ್ಷಣ ಇಲಾಖೆ ವಿಧಿಸುತ್ತಿರುವ ವಿವಿಧ ನಿಯಮಗಳಿಂದ ಅನುದಾನ ರಹಿತ ಶಾಲೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕು ಹಾಗೂ ನಿಯಮಗಳಲ್ಲಿ ಸಡಿಲಿಕೆ ನೀಡಿ ಶಾಲೆಗಳನ್ನು ಉಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಚಂದ್ರಶೇಖರ್ ಕರಜಿಗಿ, ಮಹಿಬೂಬ್ ನರಿಬೋಳ, ನಿಂಗಪ್ಪ ಆರ್., ಗುಂಡು ರಾವ್ ದೇಶಮುಖ್, ಅಣ್ಣ ರಾವ್ ಹೆಗ್ಗಿ, ಸಲೀಂ ಶೇಕ್, ರೇವಣಸಿದ್ದ ನಂದೂರ, ನಿಂಗಪ್ಪ ಮಯಾರ್, ದೇಸು ರಾಥೋಡ್, ಸಂತೋಷ್ ಜಾದವ್, ಅವಿನಾಶ್ ಕೊಡದೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button