ಕಲಬುರಗಿಜಿಲ್ಲಾಸುದ್ದಿ

ಸೇವಾಲಾಲ್ ಮಾರ್ಗದರ್ಶನ ಅಪಾರ – ಡಾ. ಮಹೇಶಕುಮಾರ ರಾಠೋಡ

ಜೇವರ್ಗಿ : ಅಲೆಮಾರಿಗಳಾಗಿದ್ದ ಬಂಜಾರ ಸಮುದಾಯಕ್ಕೆ ಒಂದೆಡೆ ನೆಲೆಸಿ ಸ್ವಾಭಿಮಾನದಿಂದ ಬದುಕುವ ದಾರಿಯನ್ನು ತೋರಿಸಿದ ಮಹತ್ವದ ವ್ಯಕ್ತಿತ್ವವೇ ಸೇವಾಲಾಲ್ ಮಹಾರಾಜ್ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ. ಮಹೇಶಕುಮಾರ ರಾಠೋಡ ಹೇಳಿದರು.

ಜೇವರ್ಗಿ ತಹಸೀಲ್ದಾರ್ ಕಾರ್ಯಾಲಯದ ವತಿಯಿಂದ ಆಯೋಜಿಸಿದ್ದ ಸೇವಾಲಾಲ್ ಮಹಾರಾಜ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಬ್ರಿಟಿಷರ ಆಡಳಿತಕಾಲದಲ್ಲಿ ಬಂಜಾರ ಸಮುದಾಯವನ್ನು ‘ಕ್ರಿಮಿನಲ್ ಟ್ರೈಬ್ಸ್’ ಎಂದು ಹಣೆಪಟ್ಟಿ ಹಚ್ಚಿ ಅತಂತ್ರ ಸ್ಥಿತಿಗೆ ತಳ್ಳಲಾಗಿತ್ತು. ಆ ಸಂದರ್ಭದಲ್ಲಿ ಸಮುದಾಯ ಕಾಡು-ಮೇಡು ಅಲೆದಾಡುವ ಬದುಕಿನಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾಗ, ಒಂದೆಡೆ ನೆಲೆಸಿ ದುಡಿದು ಬದುಕುವದೇ ಮುಕ್ತಿ ಮಾರ್ಗ ಎಂದು ಸೇವಾಲಾಲ್ ಉಪದೇಶಿಸಿದರು ಎಂದು ತಿಳಿಸಿದರು.

“ರಾಬತೋ ಚಾಬೆನ್ ಮಳಚ್” ಎಂಬ ಸಂದೇಶದ ಮೂಲಕ ದುಡಿಯುವ ಮಹತ್ವವನ್ನು ಬೋಧಿಸಿ, ಕಾಯಕವೇ ಗೌರವಯುತ ಬದುಕಿನ ಆಧಾರ ಎಂದು ಸೇವಾಲಾಲ್ ಮಹಾರಾಜ್ ಸಾರಿದರು. ಅವರ ಮಾರ್ಗದರ್ಶನದಿಂದ ಸಮುದಾಯ ಶಿಕ್ಷಣ, ದುಡಿಮೆ ಹಾಗೂ ಸ್ವಾಭಿಮಾನಿ ಬದುಕಿನತ್ತ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.

18ನೇ ಶತಮಾನದಲ್ಲೇ ಸಮಾಜ ಪರಿವರ್ತನೆಗೆ ದಾರಿದೀಪರಾದ ಸೇವಾಲಾಲ್ ಮಹಾರಾಜ್ ಆಧುನಿಕ ಸಮಾಜಕ್ಕೂ ಆದರ್ಶಪ್ರಾಯರು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರು ಸೇವಾಲಾಲ್ ಮಹಾರಾಜ್ ಭಾವಚಿತ್ರಕ್ಕೆ ಮಲಾರ್ಪಣೆ ಮಾಡಿದರು. ಗೋರ್ ಸಮಾಜದ ಪರಂಪರೆಯಂತೆ ಪಂಚರು ಭೋಗ ಅರ್ಪಿಸಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಶರ್ಮಾ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಸಮಾಜದ ಮುಖಂಡರಾದ ಬಹಾದ್ದೂರ ರಾಠೋಡ್, ಹಿರಿಯ ವಕೀಲ ತುಕಾರಾಮ ರಾಠೋಡ, ಪ್ರಭು ಜಾಧವ್, ಬಾಬು ಬಿ ಪಾಟೀಲ್, ಮರೆಪ್ಪ ರದ್ದೇವಾಡಗಿ, ರಮೇಶ್ ರಾಠೋಡ ಮಾವನೂರ, ಅಂಬರೀಷ್ ರಾಠೋಡ, ಗುಂಡು ರಾಠೋಡ, ಮಹಾಂತೇಶ ರಾಠೋಡ, ಅಂಜನಾಬಾಯಿ ರಾಠೋಡ, ಉಮಾಜಿ ರಾಠೋಡ, ಧರ್ಮಾ ಚಿನ್ನ ರಾಠೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button