ಕಾಂಗ್ರೆಸ್ ಶಾಸಕರ ಗೂಂಡಾ ವರ್ತನೆ ಖಂಡನೀಯ – ಅಯ್ಯಪ್ಪ ರಾಮತೀರ್ಥ

ಚಿತ್ತಾಪುರ: ಕರ್ನಾಟಕ ವಿಧಾನ ಮಂಡಲದ ವಿಶೇಷ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಅಲ್ಪಾವಧಿಯ ಭಾಷಣ ಓದಿ, ಸದನಕ್ಕೆ ಶುಭಕೋರಿದ ಬಳಿಕ ಹೊರಡುವ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ತೋರಿದ ಗೂಂಡಾ ವರ್ತನೆ ತೀವ್ರವಾಗಿ ಖಂಡನೀಯ ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ಶಾಸಕರ ನಡೆ ಸದನದ ಘನತೆಗೆ ಶೋಭೆ ತರುವಂಥದ್ದಲ್ಲ ಎಂದು ಕಿಡಿಕಾರಿದ್ದಾರೆ. ರಾಜ್ಯಪಾಲರು ಸಂವಿಧಾನಾತ್ಮಕ ಹುದ್ದೆಯ ಗೌರವಾನ್ವಿತ ವ್ಯಕ್ತಿಯಾಗಿದ್ದು, ಅವರಿಗೆ ಗೌರವ ನೀಡುವುದು ಎಂದರೆ ಸಂವಿಧಾನಕ್ಕೆ ಗೌರವ ನೀಡಿದಂತೆ. ಆದರೆ ಈ ಮೂಲಭೂತ ಮೌಲ್ಯವನ್ನೇ ಲೆಕ್ಕಿಸದೆ ಕಾಂಗ್ರೆಸ್ ಶಾಸಕರು ರಾಜ್ಯಪಾಲರನ್ನು ಅಡ್ಡಗಟ್ಟಿ, ಕೂಗಾಟ ನಡೆಸಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನ ವಾಗಿದ್ದು, ಅತೀವ ಖಂಡನೀಯ ಎಂದು ಹೇಳಿದ್ದಾರೆ.
ಇಂತಹ ವರ್ತನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸರ್ಕಾರದ ಎರಡನೇ ಪ್ರಮುಖ ಅಂಗವಾದ ಕಾರ್ಯಾಂಗಕ್ಕೆ ಮಾಡಿದ ಅಪಚಾರವೂ ಆಗಿದೆ ಎಂದು ಅಯ್ಯಪ್ಪ ರಾಮತೀರ್ಥ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರ ಸಿದ್ಧಪಡಿಸಿದ್ದ ಭಾಷಣ ಪ್ರತಿಯಲ್ಲಿ ಕೇಂದ್ರ ಸರ್ಕಾರದ ವಿ.ಬಿ.ಜಿ. ರಾಮಜೀ ಯೋಜನೆ (ಮನರೇಗಾ)ಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಅಂಶಗಳಿದ್ದು, ಅವುಗಳನ್ನು ಕಡಿತಗೊಳಿಸುವಂತೆ ರಾಜ್ಯಪಾಲರು ಈ ಹಿಂದೆಯೇ ಸೂಚಿಸಿದ್ದರು.
ಆದರೂ ರಾಜ್ಯ ಸರ್ಕಾರ ಆ ಸೂಚನೆಗಳನ್ನು ಪಾಲಿಸದೆ ಅದೇ ಭಾಷಣವನ್ನು ಪೂರ್ಣವಾಗಿ ಓದಬೇಕೆಂದು ಬಲವಂತ ಮಾಡಿ, ಕಾಂಗ್ರೆಸ್ ಶಾಸಕರು ಸದನದಲ್ಲಿ ರಾಜ್ಯಪಾಲರನ್ನು ಅಡ್ಡಿಪಡಿಸಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರು ಹಾಗೂ ಶಾಸಕರಾದ ಬಿ.ಕೆ. ಹರಿಪ್ರಸಾದ್, ರವಿ, ಪ್ರದೀಪ್ ಈಶ್ವರ ಸೇರಿದಂತೆ ಇನ್ನಿತರರ ನಡೆ ಅಸಮಂಜಸವಾಗಿದ್ದು, ಇಂಥ ವರ್ತನೆಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಅಪಾಯಕಾರಿ ಪರಿಣಾಮ ಉಂಟುಮಾಡುವಂತಿವೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ, ಸದನದ ಗೌರವಾನ್ವಿತ ಸ್ವೀಕರ್ ಅವರು ಕೂಡಲೇ ಇಂಥ ಗೂಂಡಾ ವರ್ತನೆ ತೋರಿದ ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಅವರು ಒತ್ತಾಯಿಸಿದ್ದಾರೆ.



