ಕಲಬುರಗಿಜಿಲ್ಲಾಸುದ್ದಿ

ಎಸ್‌ಟಿ ಜಾತಿ ಪ್ರಮಾಣ ಪತ್ರ ವಿಳಂಬ ಖಂಡಿಸಿ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ

ಸಮಸ್ಯೆ ಪರಿಹಾರಕ್ಕೆ ಕ್ರಮ: ತಳವಾರರಿಗೆ ನ್ಯಾಯ ಒದಗಿಸುವುದಾಗಿ ಶಾಸಕರ ಭರವಸೆ

ಅಫಜಲಪುರ: ಪರಿಶಿಷ್ಟ ಪಂಗಡ (ಎಸ್.ಟಿ) ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಉಂಟಾಗುತ್ತಿರುವ ಗೊಂದಲ ಹಾಗೂ ಆಡಳಿತಾತ್ಮಕ ವಿಳಂಬವನ್ನು ಖಂಡಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜದ ತಾಲೂಕು ಘಟಕದ ವತಿಯಿಂದ ಸೋಮವಾರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತಹಶೀಲ್ದಾರ್ ಕಚೇರಿವರೆಗೆ ಸಾಗಿತು. ಈ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿ ಮುಂಭಾಗದಲ್ಲಿ ಮುತ್ತಿಗೆ ಹಾಕಿದ ಪ್ರತಿಭಟ ನಾಕಾರರು, ತಳವಾರ ಸಮಾಜದ ನೈಜ ಸದಸ್ಯರಿಗೆ ಯಾವುದೇ ಅಡಚಣೆ ಇಲ್ಲದೆ ಎಸ್.ಟಿ ಜಾತಿ ಪ್ರಮಾಣ ಪತ್ರಗಳನ್ನು ತ್ವರಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಸ್ಪಷ್ಟ ಆದೇಶಗಳಿದ್ದರೂ ಸ್ಥಳೀಯ ಮಟ್ಟದಲ್ಲಿ ಅನಗತ್ಯ ಅಡಚಣೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಎಂ.ವೈ. ಪಾಟೀಲ ಅವರು ಸಮಾಜದ ಮುಖಂಡರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಶೀಘ್ರ ಬಗೆಹರಿಸುವ ಭರವಸೆ ನೀಡಿದರು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರು, “ತಳವಾರ ಸಮಾಜದ ಎಸ್.ಟಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಎರಡು ದಿನಗಳೊಳಗೆ ಇತ್ಯರ್ಥಗೊಳಿಸಲಾಗುವುದು” ಎಂದು ತಿಳಿಸಿದ್ದಾರೆ.

ಸಮಾಜದ ಮುಖಂಡರು ಮಾತನಾಡಿ, ನಿಗದಿತ ಅವಧಿಯಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ ಮತ್ತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘದ ಅಧ್ಯಕ್ಷ ಸಂತೋಷ ತಳವಾರ, ತಳವಾರ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಕಾಂತ ತಳವಾರ, ಗಿರೀಶ ತುಂಬಗಿ , ರಾಚಣ್ಣ ಯಡ್ರಾಮಿ, ಸಿದ್ದಣ್ಣ ಐರೋಡಗಿ, ಶ್ರೀಮಂತ ಬಿರಾದಾರ, ಮರೆಪ್ಪ ಜಮಾದಾರ, ಬನ್ನೆಟ್ಟಿ, ಮಲ್ಲಿಕಾರ್ಜುನ ಸುಗೂರ, ಶರಣು ದಿವಾಣಜಿ, ಮಹಾಂತಗೌಡ ಪಾಟೀಲ, ಗುರುನಾಥ ಹಾವನೂರ, ಯಶವಂತ ನಾಕ್ಕೋಡಿ, ಯಲ್ಲಪ್ಪ ತಳವಾರ, ಬಸವರಾಜ ಚೌಡಾಪುರ, ಗಂಗಾರಾಮ ಅವಣ್ಣ ತಳವಾರ, ಅಂಬರಾಯ ನಾಲ್ನೋಡಿ ಸೇರಿದಂತೆ ಅನೇಕ ಮುಖಂಡರು ಹಾಗೂ ಸಮಾಜದ ಸದಸ್ಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button