ಕಲಬುರಗಿಜಿಲ್ಲಾಸುದ್ದಿ

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿನ ತಾಂತ್ರಿಕ ದೋಷಗಳನ್ನು ತಕ್ಷಣ ಸರಿಪಡಿಸುವಂತೆ ಶಿಕ್ಷಕರ ಸಂಘ ಒತ್ತಾಯ

"ತಾಂತ್ರಿಕ ದೋಷ ಸರಿಪಡಿಸದಿದ್ದರೆ ಉಪವಾಸ ಸತ್ಯಾಗ್ರಹಕ್ಕೆ ಶಿಕ್ಷಕರ ಸಂಘ ಎಚ್ಚರಿಕೆ"

ಚಿತ್ತಾಪುರ:ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಗಣತಿ ಕಾರ್ಯದಲ್ಲಿನ ತಾಂತ್ರಿಕ ದೋಷಗಳನ್ನು ಕೂಡಲೇ ಸರಿಪಡಿಸಿ ಜನಗಣತಿ ಕಾರ್ಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ ಒತ್ತಾಯಿಸಿದರು.


ಪಟ್ಟಣದ ಪ್ರಜಾ ಸೌಧದ ಎದುರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಗಣತಿ ಕಾರ್ಯದಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಗಣತಿದಾರರು ಗುರುವಾರ ಹಮ್ಮಿಕೊಂಡ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಸೆ. 22 ರಿಂದ ಪ್ರಾರಂಭವಾದ ಸಮೀಕ್ಷೆಯು ಮೊಬೈಲ್ ಆಪ್ ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಗಣತಿದಾರರಿಗೆ ಇನ್ನೂ ಗಣತಿಯನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಗಣತಿ ಕಾರ್ಯ ಸುಗಮವಾಗಿ ಪ್ರಾರಂಭಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು. ಎರಡ್ಮೂರು ದಿನಗಳಲ್ಲಿ ತಾಂತ್ರಿಕ ಸಮಸ್ಯೆ ಸರಿಪಡಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.


ಗಣತಿದಾರರಿಗೆ ಹಂಚಿಕೆ ಮಾಡಲಾದ ಮನೆಗಳು ಬೇರೆ ಬೇರೆ ಪ್ರದೇಶ ಹಾಗೂ ಊರುಗಳಲ್ಲಿ ಇರುವುದರಿಂದ ಸಮೀಕ್ಷೆ ಮಾಡಲು ತೊಂದರೆಯಾಗುತ್ತಿದೆ, ಗಣತಿದಾರರಿಗೆ ಮನೆ ಪಟ್ಟಿ ನೀಡಬೇಕು, ಶಿಕ್ಷಕರು ಯಾವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೊ ಅದೇ ಸ್ಥಳದಲ್ಲಿ ಗಣತಿ ಕಾರ್ಯ ನಿಯೋಜಿಸುವುದು, ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕ, ಶಿಕ್ಷಕಿಯರಿಗೆ ಗಣತಿ ಕಾರ್ಯದಿಂದ ವಿನಾಯತಿ ನೀಡಬೇಕು. ಪೃಥಾ ಹಾಗೂ ಸರ್ವೇ ಆಪ್ ಸರಿಯಾಗಿ ಕಾರ್ಯ ನಿರ್ವಹಿಸುವವರೆಗೂ ಶಿಕ್ಷಕರಿಗೆ ಬಿಡುವು ನೀಡಬೇಕೆಂದು ಆಗ್ರಹಿಸಿದರು.


ಶಿಕ್ಷಕಿ ಶಿವಲೀಲಾ ಮಾತನಾಡಿ, ನವರಾತ್ರಿ ಉತ್ಸವದ ಪೂಜೆ ಪುನಸ್ಕಾರಕ್ಕೆ ಸರ್ಕಾರ ಸಮೀಕ್ಷೆ ನೆಪದಲ್ಲಿ ಅವಕಾಶ ಮಾಡಿಕೊಡುತ್ತಿಲ್ಲ. ತಾಂತ್ರಿಕ ಸಮಸ್ಯೆಯಿಂದ ಶಿಕ್ಷಕರು ಮಾನಸಿಕವಾಗಿ ನೊಂದಿದ್ದಾರೆ ಯ್ಯಾಪ್, ಮ್ಯಾಪ್ ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ಶಿಕ್ಷಕರು ಅಲೆದಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.


ಶಿಕ್ಷಕ ದೇವಿಂದ್ರಪ್ಪ ಇಮಡಾಪೂರ ಮಾತನಾಡಿ, ಚಿತ್ತಾಪುರ ಪಟ್ಟಣದ ವಾರ್ಡ್ ನಂ.17 ಬಂದಿದೆ ಆದರೆ ಸಮೀಕ್ಷೆಯಲ್ಲಿ ಭೀಮನಳ್ಳಿ, ರಾಮತೀರ್ಥ ಎಂದು ತೋರಿಸುತ್ತದೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಶಿಕ್ಷಕಿಯರಾದ ಅಂಬಿಕಾ, ಮಹೇಶ್ವರಿ ಮಾತನಾಡಿದರು. ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ ಮರತೂರಕರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಶಿಕ್ಷಕ ಗಣತಿದಾರರಾದ ಕಾಶಿರಾಯ ಕಲಾಲ್, ಸುರೇಶ್ ಸರಾಫ್, ವೀರಸಂಗಪ್ಪ ಸುಲೇಗಾಂವ, ವೀರಭದ್ರಪ್ಪ ಗುರುಮಿಠಕಲ್, ಶರಣಬಸಪ್ಪ ಬೊಮ್ಮನಳ್ಳಿ, ಆದಪ್ಪ ಬಗಲಿ, ಸುರೇಶ್ ಓಂಕಾರ, ಶರಣಪ್ಪ ಐಕೂರ, ಡಾ.ರಾಜಕುಮಾರ್, ಮಲ್ಲಿನಾಥ, ಅಂಬಣ್ಣ, ವಿಜಯಕುಮಾರ್ ಭಂಕಲಗಿ, ಮನೋಹರ ಹಡಪದ, ವೀರೇಶ ಕರದಾಳ, ಛಾಯಾ, ರತ್ನಕಲಾ, ಅನ್ನಪೂರ್ಣ, ಸುಜಾತಾ, ಮಲ್ಲಿನಾಥ ಬಾಹರಪೇಟ್, ಪರಾನಮ ಪರಜಾನ, ರೇಷ್ಮಾ, ಶಬನಾ, ಸುಮಂಗಲಾ, ಜಗದೇವಿ ಸೇರಿದಂತೆ ಇತರರಿದ್ದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೂ ಮನವಿ ಪತ್ರ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button