ಘನಮಠದ ಶ್ರೀಗಳಿಗೆ ಕನ್ನಡ ಕಲಿಯಲು ನಾಲವಾರ ಮಠ ಪ್ರೇರಣೆ

ಚಿತ್ತಾಪುರ: ಕನ್ನಡ ಸಾಹಿತ್ಯಕ್ಕೆ ನಾಲವಾರ ಮಠದ ಕತೃು ಕೋರಿಸಿದ್ದೇಶ್ವರರು ಘನಮಠದ ಪೂಜ್ಯ ನಾಗಭೂಷಣ ಶಿವಯೋಗಿಗಳಿಗೆ ಕನ್ನಡ ಕಲಿಯಲು ಪ್ರೇರಪಿಸಿದ್ದಲ್ಲದೆ, ಅವರಿಂದ ಕನ್ನಡ ಸಾಹಿತ್ಯ ರಚನೆಯಾಗುವಂತೆ ಮಾಡಿದ ಕೀರ್ತಿ ನಾಲವಾರ ಮಠಕ್ಕೆ ಸಲ್ಲುತ್ತದೆ ಎಂದು ಶ್ರೀಕೋರಿಸಿದ್ದೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಅವರು ಶನಿವಾರ ನಾಲವಾರದ ಸಿದ್ದಲಿಂಗೇಶ್ವರ ವಿದ್ಯಾ ಸಂಸ್ಥೆಯಲ್ಲಿ ನಡೆದ ನಾಲವಾರ ವಲಯ ಕನ್ನಡ ಸಾಹಿತ್ಯ ಪರಿಷತ್ ಉದ್ಘಾಟನೆ. ನೂತನ ಪದಾಧಿಕಾರಿಗಳ ಪದಗ್ರಹಣ. ಹಾಗೂ ಕವಿಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ತೆಲುಗು ಭಾಷೆಯ ಆಶು ಕವಿಯಾಗಿದ್ದ ಆಂಧ್ರಪ್ರದೇಶದ ಘನಮಠದ ನಾಗಭೂಷಣ ಶಿವಯೋಗಿಗಳು, ಶ್ರೀಮಠದಕ್ಕೆ ಶ್ರೀ ಕೋರಿಸಿದ್ದೇಶ್ವರರ ದರ್ಶನಕ್ಕೆ ಬಂದಾಗ, ಪೂಜ್ಯರು ದರ್ಶನ ನೀಡದೆ ಇದ್ದಾಗ, ಮಠದ ಮೇಲೆ ಕುಳಿತ ಕಾಗೆಯನ್ನು ನೋಡಿ, ಕೋರಿಸಿದ್ದೇಶ್ವರರ ಮೇಲೆ ಕವನ ಹೇಳಿದಾಗ, ಕೋರಿಸಿದ್ದೇಶ್ವರರು ದರ್ಶನ ನೀಡಿ, ಕಂಬಳಿ ಹೊದಿಸಿ, ಅವರನ್ನು ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡಲು ಪ್ರೇರಿಪಿಸಿದ್ದರಿಂದ, ಯರಗೋಳದ ರೇವಣಸಿದ್ದಯ್ಯ ಶಾಸ್ತ್ರಿ ಅವರ ಬಳಿ ಕಲಿತು ಸಾಹಿತ್ಯ ರಚನೆ ಮಾಡಿದ್ದು, ಇತಿಹಾಸವಿದೆ ಎಂದು ಹೇಳಿ, ನಾಲವಾರ ನಲ್ವಾರ ಎಂದು ಕರೆಯಲಾಗುತ್ತಿದ್ದು, ಒಳ್ಳೆಯ ಹರಕೆ ಎಂದು ಅರ್ಥವಾಗಿದೆ. ಇಲ್ಲಿ ಕನ್ನಡ ಸಾಹಿತ್ಯದ ಕೆಲಸ ಹೆಚ್ಚು ಹೆಚ್ಚು ಆಗಬೇಕೆಂದು ಹೇಳಿದರು.
ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷರಾದ ಲಿಂಗಾರೆಡ್ಡಿಗೌಡ ಭಾಸರೆಡ್ಡಿ ಮಾತನಾಡಿ, ಕನ್ನಡ ಸಾಹಿತ್ಯ ಚಟುವಟಿಕೆ ಜತೆಗೆ ಕನ್ನಡದ ಕಲಾ ಪ್ರತಿಭೆಗಳು ಬೆಳಕಿಗೆ ಬರುವಂತೆ ಅರ್ಥಪೂರ್ಣ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಹೇಳಿದರು.
ರಾಯಚೂರು ಕೃಷಿ ವಿವಿ ಮಾಜಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ ಮಾತನಾಡಿ, ವಲಯದಲ್ಲಿ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಪ್ರತಿ ವರ್ಷ ಐದು ಜನರಿಗೆ ‘ಉತ್ತಮ ಅತಿಥಿ ಶಿಕ್ಷಕ’ ಪ್ರಶಸ್ತಿ ನೀಡುವ ಕಾರ್ಯ ಮಾಡಬೇಕು ಎಂದು ಹೇಳಿದರು.
ತಾಲೂಕು ಕಸಾಪ ಗೌರವ ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ, ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಿಟಕಲ್, ಕೆ.ರಮೇಶ ಭಟ್ಟ, ಸಿದ್ದಯ್ಯ ಶಾಸ್ತ್ರಿ ನಂದೂರಮಠ, ಶರಣಗೌಡ ಕರೆಡ್ಡಿ ಮಾತನಾಡಿದರು.
ಗಮನ ಸೆಳೆದ ಕವಿಗೋಷ್ಠಿ ಇದೇ ಸಂದರ್ಭದಲ್ಲಿ ನಡೆದ ಕವಿ ಗೋಷ್ಠಿಯಲ್ಲಿ ಮೈಲಾರಿ ಬಳಬಾ, ಶರಣಗವಡ ಕರೆಡ್ಡಿ, ಚಂದ್ರು ಕರಣಿಕ, ಅರುಣಕುಮಾರ ಸುಣಗಾರ, ಶಿವಲೀಲಾ, ಸಿದ್ದಯ್ಯ ಶಾಸ್ತ್ರಿ,ರವಿ ಕೊಳ್ಳೂರ, ಡಾ.ಸತೀಷ ಸುಗ್ಗಾ, ಲಕ್ಷ್ಮೀಕಾಂತ ಅಂಬಿಗರ, ಸುರೇಶ ಮಳಬಾ ತಮ್ಮ ಕವನ ವಾಚನ ಮಾಡಿದರು.ಸಾಹಿತಿ ಲಿಂಗಣ್ಣ ಮಲ್ಕನ್, ಪ್ರಮುಖರಾದ ಶಿವುಕುಮಾರ ಸುಣಗಾರ, ಮೈಲಾರಿ ಮಳಬಾ, ಚಂದ್ರಶೇಕರ ಲೇವಡಿ, ಮಲ್ಲಿಕಾರ್ಜುನ ಮಳಗಾ, ಮಲ್ಲಿಕಾರ್ಜುನ ಹಡಪದ ವೇದಿಕೆ ಮೇಲೆ ಇದ್ದರು.
ವೈಷ್ಣವಿ, ಪಲ್ಲವಿ ಹಾಗೂ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ಪ್ರೀತಮ್ ಪ್ರಾರ್ಥಿಸಿದರು. ಸುರೇಶ ಮಳಗಾ ಸ್ವಾಗತಿಸಿದರು. ರಾಜೇಂದ್ರ ಕೊಲ್ಲೂರ ನಿರೂಪಿಸಿದರು.ಬೆಳಗ್ಗೆ ಶ್ರೀಕೋರಿಸಿದ್ದೇಶ್ವರ ಸಂಸ್ಥಾನ ಮಠದಿಂದ ಎತ್ತಿನ ಬಂಡಿಯಲ್ಲಿ ಭುವನೇಶ್ವರಿ ಹಾಗೂ ಪೂಜ್ಯ ಡಾ.ಸಿದ್ದ ತೋಟೆಂದ್ರ ಶಿವಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.



