ಕಲಬುರಗಿಜಿಲ್ಲಾಸುದ್ದಿ

ಪದವಿಪೂರ್ವ ಉಪನ್ಯಾಸಕರ ಗೌರವಕ್ಕೆ ಧಕ್ಕೆ: ಜಂಟಿ ಸುತ್ತೋಲೆ ಹಿಂಪಡೆಯುವಂತೆ ಮನವಿ

ಜಂಟಿ ಸುತ್ತೋಲೆ ಹಿಂಪಡೆಯದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆ ಎಚ್ಚರಿಕೆ

ಕಲಬುರಗಿ: ಶಾಲಾಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಯಟ್) ಸಂಯುಕ್ತವಾಗಿ ಹೊರಡಿಸಿರುವ ದಿನಾಂಕ 18-10-2025ರ ಜಂಟಿ ಸುತ್ತೋಲೆಗೆ ರಾಜ್ಯದ ಪದವಿಪೂರ್ವ ಉಪನ್ಯಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಉಪನ್ಯಾಸಕರ ಸಂಘದ ನಾಯಕರು ಉಪನಿರ್ದೇಶಕರಾದ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಕಲಬುರಗಿ ಜಿಲ್ಲೆ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ, ಸುತ್ತೋಲೆ ಹಿಂಪಡೆಯುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಈ ಸುತ್ತೋಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಲ್ಲಿ (ಡಯಟ್) ಕಾರ್ಯನಿರ್ವಹಿಸುತ್ತಿರುವ ಹಿರಿಯ ಉಪನ್ಯಾಸಕರ ಮೂಲಕ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ.

ಆದರೆ, ಕರ್ನಾಟಕ ರಾಜ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ (ರಿ), ಬೆಂಗಳೂರು ಈ ನಿರ್ಧಾರವನ್ನು ವಿರೋಧಿಸಿ, “ಡಯಟ್ ಉಪನ್ಯಾಸಕರು ಅಥವಾ ಪ್ರಶಿಕ್ಷಕರು ಪ್ರೌಢಶಾಲಾ ತರಬೇತಿ ಪರಿಣಿತರಾಗಿದ್ದು, ಪದವಿಪೂರ್ವ ಶಿಕ್ಷಣದ ವಿಷಯ ಆಳತೆಯ ಅರಿವಿಲ್ಲ. ಡಯಟ್‌ನಲ್ಲಿ ಉಪನ್ಯಾಸಕರ ಹುದ್ದೆ ಇಲ್ಲ, ಪ್ರಶಿಕ್ಷಕರೇ ಕಾರ್ಯನಿರ್ವಹಿಸುತ್ತಿದ್ದಾರೆ. ಪಿಯು ಮಟ್ಟದ ವಿಜ್ಞಾನ, ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್ ಮುಂತಾದ ವಿಷಯಗಳ ಬೋಧನಾತ್ಮಕ ಅರಿವು ಅವರಿಗೆ ಇಲ್ಲ” ಎಂದು ತಿಳಿಸಿದ್ದಾರೆ.

ಅವರು ಮುಂದುವರಿಸಿ, “ಶಾಲಾ ತರಬೇತಿ ಹಂತದ ಅಧಿಕಾರಿಗಳು ಪಿಯು ಕಾಲೇಜುಗಳ ಬೋಧನಾ ಗುಣಮಟ್ಟವನ್ನು ಪರಿಶೀಲಿಸುವುದು ಶೈಕ್ಷಣಿಕ ತತ್ವಗಳಿಗೆ ಧಕ್ಕೆ ತರುತ್ತದೆ. ಈ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಬೇಕು, ಇಲ್ಲವಾದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಜಿ. ಮಲ್ಲಪ್ಪ, ಕಾರ್ಯದರ್ಶಿ ನರಸಪ್ಪ ರಂಗೋಲಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಬಸವರಾಜ ಬಿರಾಜದಾರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳುಂಡಗಿ , ಶರಣಗೌಡ ಪಾಟೀಲ್, ಬುರ್ಲಿ ಪ್ರಹ್ಲಾದ, ಉಮೇಶ್ ಅಷ್ಟಗಿ, ರಾಜು ಗಂಗಾಧರ್, ಶ್ರೀಶೈಲ್ ಬೋನಾಳ, ಸುಜಾತ ಎಂ., ದೇವನಗೌಡ ಪಾಟೀಲ್, ಜಗಪ್ಪ ಹೊಸಮನಿ, ದಶರಥ ರಾಠೋಡ್, ಬಿಸಿ ಚವ್ಹಣ್, ಚಂದ್ರಶೇಖರ್ ದೊಡ್ಡಮನಿ, ಮಾಪಣ್ಣ ಜಿರೋಳಿ ಹಾಗೂ ಪಾಂಡು ಎಲ್. ರಾಠೋಡ್ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button