ಚಿತ್ತಾಪುರ ಪಥಸಂಚಲನ ವಿವಾದ: ಒಪ್ಪಂದ ಕಾಣದೆ ಶಾಂತಿ ಸಭೆ ಮುಕ್ತಾಯ – ಆರ್‌ಎಸ್‌ಎಸ್ ಮತ್ತು ದಲಿತ ಸಂಘಟನೆಗಳ ನಡುವೆ ವಾಗ್ವಾದ

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರವಾದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ನೀಡುವ ವಿಚಾರವಾಗಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಶಾಂತಿ ಸಭೆ ಯಾವುದೇ ಒಪ್ಪಂದ ಕಾಣದೆ ವಾಗ್ವಾದದಲ್ಲಿ ಮುಕ್ತಾಯಗೊಂಡಿದೆ.
ಆರ್‌ಎಸ್‌ಎಸ್ ತನ್ನ ಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 19ರಂದು ಪಥಸಂಚಲನ ನಡೆಸಲು ಯೋಜಿಸಿದ್ದರೂ, ಚಿತ್ತಾಪುರ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದರು. ಬಳಿಕ ಆರ್‌ಎಸ್‌ಎಸ್‌ನ ಕಲಬುರಗಿ ವಿಭಾಗದ ಮುಖ್ಯಸ್ಥ ಅಶೋಕ್ ಪಾಟೀಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ನವೆಂಬರ್ 2ರಂದು ಪಥಸಂಚಲನ ನಡೆಸಲು ಅವಕಾಶ ನೀಡುವಂತೆ ಆಡಳಿತಕ್ಕೆ ಸೂಚನೆ ನೀಡಿತ್ತು.
ಇದಾದ ನಂತರ ಪ್ರತಿಕ್ರಿಯೆಯಾಗಿ ಭೀಮ್ ಆರ್ಮಿ, ಭಾರತೀಯ ದಲಿತ ಪ್ಯಾಂಥರ್ಸ್ (ರಿ) ಸೇರಿದಂತೆ ಹಲವು ಸಂಘಟನೆಗಳು ಅದೇ ದಿನ (ನ.2) ರ‍್ಯಾಲಿ ನಡೆಸಲು ಅನುಮತಿ ಕೋರಿ ಅಕ್ಟೋಬರ್ 21ರಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು.
“ಆರ್‌ಎಸ್‌ಎಸ್‌ನ ಕಾರ್ಯಗಳು ಮತ್ತು ಆಲೋಚನೆಗಳು ಯುವಜನರು ಹಾಗೂ ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು” ಎಂದು ಹೇಳಿದ ದಲಿತ ಪ್ಯಾಂಥರ್ಸ್, ಒಂದು ಕೈಯಲ್ಲಿ ಸಂವಿಧಾನದ ಪೀಠಿಕೆ, ಇನ್ನೊಂದು ಕೈಯಲ್ಲಿ ನೀಲಿ ಧ್ವಜ ಹಿಡಿದು ರ‍್ಯಾಲಿ ನಡೆಸಲು ಅನುಮತಿ ಕೋರಿದ್ದರೆ, ಭೀಮ್ ಆರ್ಮಿ ತ್ರಿವರ್ಣ ಧ್ವಜ, ಬೌದ್ಧ ಪಂಚಶೀಲ ಧ್ವಜ ಮತ್ತು ಬಿದಿರಿನ ಕೋಲು ಹಿಡಿದು ಪಥಸಂಚಲನ ನಡೆಸಲು ಅನುಮತಿ ಕೇಳಿತ್ತು. ಈವರೆಗೆ ಸುಮಾರು 12 ಸಂಘಟನೆಗಳು ನವೆಂಬರ್ 2ರಂದು ಪಥಸಂಚಲನ ಅಥವಾ ರ‍್ಯಾಲಿ ನಡೆಸಲು ಮನವಿ ಸಲ್ಲಿಸಿದ್ದವೆ.
ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠವು, “ಈ ವಿಷಯವನ್ನು ಹೆಚ್ಚು ದಿನ ಎಳೆಯದೇ, ಸೌಹಾರ್ದಯುತ ಪರಿಹಾರ ಕಂಡುಕೊಳ್ಳಿ” ಎಂದು ಎರಡೂ ಪಾಳಯಗಳಿಗೆ ಸೂಚಿಸಿತ್ತು.
ಹೈಕೋರ್ಟ್ ನಿರ್ದೇಶನದಂತೆ ಶಾಂತಿ ಸಭೆಯನ್ನು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನೂಮ್ ನೇತೃತ್ವದಲ್ಲಿ ನಡೆಸಲಾಗಿದ್ದು, ಸಭೆಯಲ್ಲಿ ಸೇಡಂ ಸಹಾಯಕ ಆಯುಕ್ತರು, ಚಿತ್ತಾಪುರ ತಹಶೀಲ್ದಾರ, ಪುರಸಭೆಯ ಮುಖ್ಯಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ, ಶಹಾಬಾದ ಉಪ ವಿಭಾಗದ ಡಿ.ಎಸ್.ಪಿ., ಚಿತ್ತಾಪುರ ವೃತ್ತ ನಿರೀಕ್ಷಕರು ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಎಲ್ಲಾ ಸಂಘಟನೆಗಳಿಗೆ 10 ನಿಮಿಷ ಮಾತನಾಡುವ ಅವಕಾಶ ನೀಡಲಾಯಿತು. ಈ ವೇಳೆ ಆರ್‌ಎಸ್‌ಎಸ್ ಪ್ರತಿನಿಧಿಗಳು “ನ್ಯಾಯಾಲಯ ನೀಡಿದ ದಿನಾಂಕಕ್ಕೆ ಪಥಸಂಚಲನ ನಡೆಸುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಇದರಿಂದಾಗಿ ಸಭೆಯಲ್ಲಿ ಆರ್‌ಎಸ್‌ಎಸ್ ಪರವಾಗಿ ಮಾತನಾಡಿದ ಬಿಜೆಪಿ ಮುಖಂಡ ಅಂಬರಾಯ ಅಪ್ಪಗಿ ಹಾಗೂ ದಲಿತ ಸಂಘಟನೆಗಳ ಪ್ರತಿನಿಧಿಗಳ ನಡುವೆ ವಾಗ್ವಾದ ಉಂಟಾಗಿ, ಸಭೆಯ ವಾತಾವರಣ ಗೊಂದಲಮಯವಾಯಿತು. ಕೊನೆಗೆ ಯಾವುದೇ ಒಪ್ಪಂದ ಸಾಧ್ಯವಾಗದೆ ಸಭೆ ಮುಕ್ತಾಯಗೊಂಡಿತು.
ಸಭೆಯಲ್ಲಿ ಆರ್‌ಎಸ್‌ಎಸ್, ಭೀಮ್ ಆರ್ಮಿ, ಭಾರತೀಯ ದಲಿತ ಪ್ಯಾಂಥರ್ (ರಿ), ಜೈಭೀಮ್ ಸೇನೆ, ಗೊಂಡ-ಕುರುಬ ಎಸ್‌ಟಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ (ರಿ), ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕ್ರಿಶ್ಚಿಯನ್ ಹೌಸ್ ಬೀದರ್‌ನ ಸಂಜಯ ಜಾಗೀರದಾರ, ದಲಿತ ಸಂಘರ್ಷ ಸಮಿತಿ (ಭೀಮ ಮಾರ್ಗ), ಡಾ. ವಿಠಲ ದೊಡ್ಡಮನಿ, ಸಂತೋಷ ಬಿ. ಪಾಳಾ ಸೇರಿದಂತೆ ಹಲವು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಶಾಂತಿ ಸಭೆ ಯಾವುದೇ ಒಪ್ಪಂದಕ್ಕೆ ಬರದೇ ಮುಕ್ತಾಯವಾದ ಹಿನ್ನೆಲೆಯಲ್ಲಿ, ಪಥಸಂಚಲನದ ಅಂತಿಮ ನಿರ್ಧಾರವನ್ನು ನ್ಯಾಯಾಲಯದ ಮಾರ್ಗದರ್ಶನದಂತೆ ಜಿಲ್ಲಾಡಳಿತ ಕೈಗೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ.



