ಕೋಲಿ-ಕಬ್ಬಲಿಗ ಸಮಾಜ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಸರ್ಕಾರವೇ ಬಾಗಿಲಿಗೆ ಬರುತ್ತದೆ: ತಿಪ್ಪಣ್ಣಪ್ಪ ಕಮಕನೂರ

ಕಲಬುರಗಿ: ಭಿನ್ನಾಭಿಪ್ರಾಯ ಬದಿಗೊತ್ತಿ ನಾವೆಲ್ಲರೂ ಸಂಘಟಿತರಾಗಿ ಒಗ್ಗಟ್ಟು ತೋರಿಸಿದರೆ ರಾಜ್ಯ ಸರ್ಕಾರವೇ ಮನೆ ಬಾಗಿಲಿಗೆ ಬರುತ್ತದೆ. ಸಮಾಜದ ಮುಂದೆ ಯಾರೂ ದೊಡ್ಡವರಿಲ್ಲ, ಸಮಾಜಕ್ಕೆ ಅನ್ಯಾಯವಾದರೆ ಯಾವ ತ್ಯಾಗಕ್ಕೂ ಸಿದ್ಧ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕೋಲಿ ಸಮಾಜದ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.
ನಗರದ ಕನ್ನಡ ಭವನದಲ್ಲಿ ಭಾನುವಾರ ನಡೆದ ರಾಜ್ಯ ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಕೋಲಿ, ಕಬ್ಬಲಿಗ, ಅಂಬಿಗ, ಮೋಗವೀರ ಮತ್ತು ಬೆಸ್ತ ಸಮುದಾಯಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಒಟ್ಟಾಗಿ ಹಕ್ಕೊತ್ತಾಯ ಮಂಡಿಸೋಣ. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 10 ಲಕ್ಷ ಜನರನ್ನು ಸೇರಿಸಿ ಬೃಹತ್ ಹೋರಾಟ ನಡೆಸೋಣ” ಎಂದು ಹೇಳಿದರು.
ಸಭೆಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಶಿವಕುಮಾರ ನಾಟಿಕಾರ ಮಾತನಾಡಿ, “ಬುಡಕಟ್ಟು ಲಕ್ಷಣ ಇರುವ ವೈಜ್ಞಾನಿಕ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದಾಗ ಮಾತ್ರ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರುವ ಸಾಧ್ಯತೆ ಇದೆ” ಎಂದು ಅಭಿಪ್ರಾಯಪಟ್ಟರು.
ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಮಾತನಾಡಿ, “ಒಗ್ಗಟ್ಟಿನ ಕೊರತೆಯಿಂದ ರಾಜ್ಯದ 224 ಕ್ಷೇತ್ರಗಳಲ್ಲಿ ನಮ್ಮ ಸಮಾಜದ ಒಬ್ಬರೂ ಶಾಸಕರಿಲ್ಲ. ಮುಂದಿನ ದಿನಗಳಲ್ಲಿ ರಾಜಕೀಯ ಅಧಿಕಾರ ಸಿಗಬೇಕಾದರೆ ಎಲ್ಲರೂ ಒಗ್ಗಟ್ಟಾಗಿರಬೇಕು” ಎಂದರು.
ಸಭೆಯಲ್ಲಿ ತಳವಾರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ, ಧನರಾಜ ಬೆಂಗಳೂರು, ಕೋಲಿ ಸಮಾಜದ ಜಿಲ್ಲಾಧ್ಯಕ್ಷ ರವಿರಾಜ ಕೊರವಿ, ಹಾಫ್‌ಕಾಮ್ಸ್ ನಿರ್ದೇಶಕ ತಿಪ್ಪಣ್ಣ ರಡ್ಡಿ, ಕೋಲಿ ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ, ಮುಖಂಡರಾದ ವಾಣಿಶ್ರೀ ಸಗರಕರ್, ಶಾಂತಪ್ಪ ಕೂಡಿ, ಸರ್ದಾರ್ ರಾಯಪ್ಪ ಮುಂತಾದವರು ಮಾತನಾಡಿದರು.
ಧಾರ್ಮಿಕ ಸಾನ್ನಿಧ್ಯವನ್ನು ತೊನಸನಳ್ಳಿಯ ಮಲ್ಲಣ್ಣಪ್ಪ ಸ್ವಾಮೀಜಿ, ಗೌರಗುಂಡಗಿಯ ವರಲಿಂಗೇಶ್ವರ ಸ್ವಾಮೀಜಿ, ರಟಕಲ್‌ನ ರೇವಣಸಿದ್ದೇಶ್ವರ ಶರಣರು ವಹಿಸಿದ್ದರು.
ಸಭೆಗೆ ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಅಧ್ಯಕ್ಷತೆ ವಹಿಸಿದರು. ಪ್ರಮುಖರಾಗಿ ಶಂಕರ ಮ್ಯಾಕೇರಿ, ಹಣಮಂತ ಸಂಕನೂರ, ನಾಗರತ್ನ ಅನಪುರ, ಪಿಂಟು ಜಮಾದಾರ, ಶಿವು ಧಣಿ, ಸುನೀತಾ ತಳವಾರ, ರೇಖಾ ಕಟ್ಟಿಮನಿ, ಸಿದ್ದು ಬಾನರ, ಲಕ್ಷ್ಮಣ ಆವಂಟಿ, ಚಂದ್ರಕಾಂತ ತಳವಾರ, ಶಿವಾನಂದ ಹೊನಗುಂಟಿ, ಅವ್ವಣ್ಣಗೌಡ ಪಾಟೀಲ್, ಮಲ್ಲು ಗುಡುಬಾ, ನಿಂಗಪ್ಪ ದೇವಣಗಾಂವ್, ರಾಚಣ್ಣ ಯಡ್ರಾಮಿ, ದೇವೇಂದ್ರ ಚಿಗರಳ್ಳಿ, ವೈಜನಾಥ ಕಟ್ಟೊಳ್ಳಿ, ಗಿರೀಶ ಮತ್ತಿತರರು ಹಾಜರಿದ್ದರು. ರಾಮಲಿಂಗ ನಾಟಿಕಾರ ಸ್ವಾಗತಿಸಿದರು. ಭೀಮಾಶಂಕರ ನಿರೂಪಣೆ ಮಾಡಿದರು.