ಕಲ್ಯಾಣ ಕರ್ನಾಟಕರಾಜ್ಯ

ಕಲಬುರಗಿ|ವೈರಲ್ ವೀಡಿಯೋ ಪ್ರಕರಣ: ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಅಲೋಕ್ ಕುಮಾರ್ ಭೇಟಿ, ಪರಿಶೀಲನೆ

ಕಲಬುರಗಿ: ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಅಕ್ರಮವಾಗಿ ಜೂಜಾಟ, ಮದ್ಯಪಾನ, ಸಿಗರೇಟ್ ಸೇವನೆ ಸೇರಿದಂತೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ವೀಡಿಯೋಗಳು ವೈರಲ್ ಆದ ಹಿನ್ನೆಲೆಯಲ್ಲಿ, ಇಂದು (ಜ.3) ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ಅವರು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವೈರಲ್ ವೀಡಿಯೋ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ಸಂಸ್ಥೆ (ಎಸ್‌ಐಟಿ) ರಚನೆಯಾದ ಬಳಿಕ ಡಿಜಿಪಿ ಅವರ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿನ ಪ್ರತಿಯೊಂದು ಬ್ಯಾರಕ್‌ಗಳನ್ನು ಕೂಲಂಕಷವಾಗಿ ತಪಾಸಣೆ ನಡೆಸಿ, ಜೈಲಿನೊಳಗೆ ಅಕ್ರಮ ವಸ್ತುಗಳು ಹೇಗೆ ಸರಬರಾಜಾಗುತ್ತಿವೆ, ಭದ್ರತಾ ಲೋಪಕ್ಕೆ ಕಾರಣರಾದವರು ಯಾರು, ಕೈದಿಗಳಿಗೆ ಐಷಾರಾಮಿ ಜೀವನ ನಡೆಸಲು ಅವಕಾಶ ಹೇಗೆ ಲಭ್ಯವಾಗುತ್ತಿದೆ ಎಂಬ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು ಎಂದು ತಿಳಿದುಬಂದಿದೆ.

ಈ ವೇಳೆ ಜೈಲು ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಕೆಲ ಕೈದಿಗಳನ್ನು ಡಿಜಿಪಿ ವಿಚಾರಣೆ ನಡೆಸಿದರು. ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಯಾವುದೇ ರೀತಿ ದಯೆಯಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂದರ್ಭದಲ್ಲಿ ಕಾರಾಗೃಹ ಇಲಾಖೆ ಹೆಚ್ಚುವರಿ ಮಹಾನಿರೀಕ್ಷಕ ಪಿ.ವಿ. ಆನಂದ ರೆಡ್ಡಿ, ಉತ್ತರ ವಲಯ ಡಿಐಜಿ ಪಿ. ಶೇಷಾ, ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಜೈಲು ಅಧೀಕ್ಷಕಿ ಡಾ. ಅನಿತಾ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರಾಗೃಹಕ್ಕೆ ಪ್ರವೇಶಿಸುವ ಮೊದಲು ಡಿಜಿಪಿ ಅಲೋಕ್ ಕುಮಾರ್ ಅವರು ಪೊಲೀಸ್ ಇಲಾಖೆಯಿಂದ ಗೌರವ ವಂದನೆ ಸ್ವೀಕರಿಸಿ, ಬಳಿಕ ತಪಾಸಣೆ ಕೊಠಡಿಗೆ ಭೇಟಿ ನೀಡಿ ಜೈಲಿನೊಳಗೆ ಪ್ರವೇಶಿಸಿ ಪರಿಶೀಲನೆ ಆರಂಭಿಸಿದರು.

Related Articles

Leave a Reply

Your email address will not be published. Required fields are marked *

Back to top button