ಕೋಲಿ-ಕಬ್ಬಲಿಗರಿಗೆ ಬುಡಕಟ್ಟು ಲಕ್ಷಣಗಳೆಲ್ಲಾ ಇದ್ದರೂ ಪರಿಶಿಷ್ಟ ಪಂಗಡ ಸ್ಥಾನ ನೀಡದೆ ಅನ್ಯಾಯ – ಡಾ. ತಳವಾರ ಸಾಬಣ್ಣ

ಕಲಬುರಗಿ: ಕೋಲಿ–ಕಬ್ಬಲಿಗ ಸಮುದಾಯಕ್ಕೆ ಎಲ್ಲಾ ಬುಡಕಟ್ಟು ಲಕ್ಷಣಗಳಿದ್ದರೂ, ಕಳೆದ 40 ವರ್ಷಗಳಿಂದ ಅವರನ್ನು ಪರಿಶಿಷ್ಟ ಪಂಗಡ (ಎಸ್ಟಿ) ಪಟ್ಟಿಗೆ ಸೇರಿಸದೆ ಅನ್ಯಾಯ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ತಳವಾರ ಸಾಬಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಆಮಂತ್ರಣ ನೆಕ್ಸ್ಟ್ ಹೋಟೆಲ್ನಲ್ಲಿ “ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್, ಕಲಬುರಗಿ” ವತಿಯಿಂದ ಹಮ್ಮಿಕೊಂಡ “ಕೋಲಿ–ಕಬ್ಬಲಿಗ ಸಮಾಜದ ಎಸ್ಟಿ ಹೋರಾಟ ಮತ್ತು ಪ್ರಸ್ತುತ ಸ್ಥಿತಿ” ವಿಷಯದ ಮೇಲೆ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ವಿಷಯ ಮಂಡನೆಕಾರರಾಗಿ ಮಾತನಾಡಿದರು.
ಅವರು ಹೇಳಿದರು, “ಕರ್ನಾಟಕದಲ್ಲಿ ಈಗಾಗಲೇ ಪರಿಶಿಷ್ಟ ಪಂಗಡದಲ್ಲಿ ಟೋಕ್ರೆ ಕೋಲಿ, ಕೋಯಾ ಮೊದಲಾದ ಸಮುದಾಯಗಳಿವೆ. ಇವುಗಳ ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗರಲ್ಲೂ ಬುಡಕಟ್ಟು ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತವೆ. ಟೋಕ್ರೆ ಕೋಲಿ ಪರ್ಯಾಯ ಪದವೆಂದು ನಮಗೆ ಸೇರಿಸಲು ಹಲವು ಬಾರಿ ರಾಜ್ಯದಿಂದ ಅಧ್ಯಯನ ವರದಿ ಕಳಿಸಲಾಗಿದೆ. ಆದರೆ ಪ್ರತಿ ಬಾರಿ ಕೇಂದ್ರ ಸರ್ಕಾರದ ರಿಜಿಸ್ಟರ್ ಜನರಲ್ ಆಫ್ ಇಂಡಿಯಾ ವರದಿಯನ್ನು ತಿರಸ್ಕರಿಸುತ್ತಿದ್ದಾರೆ,” ಎಂದು ಬೇಸರ ವ್ಯಕ್ತಪಡಿಸಿದರು.
ಅವರು ಮತ್ತಷ್ಟು ಹೇಳಿದರು: “ಬ್ರಿಟಿಷರ ಕಾಲದಿಂದ ಇಂದಿನವರೆಗೂ ದೇಶದ ವಿವಿಧ ರಾಜ್ಯಗಳಲ್ಲಿ ಕೋಲಿ ಸಮಾಜವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಅಲ್ಲಿ ಅವರ ಆಚಾರ–ವಿಚಾರ, ಸಾಂಪ್ರದಾಯ, ಉಡುಗೆ–ತೊಡುಗೆ, ಭಾಷೆ, ದೈವರಾಧನೆ, ಆಹಾರ ಪದ್ಧತಿ, ಕುಲಕಸಬು ಎಲ್ಲವೂ ಬುಡಕಟ್ಟು ಲಕ್ಷಣಗಳಿಗೆ ಸಾಕ್ಷಿಯಾಗಿದೆ. ಇದರ ಕುರಿತು ಸುಮಾರು 1600 ಪುಟಗಳ ದಾಖಲೆ ಸಂಗ್ರಹಿಸಿ, 250 ಪುಟಗಳ ಸಂಕ್ಷಿಪ್ತ ವರದಿ ಹಾಗೂ ಪಿಪಿಟಿ ತಯಾರಿಸಲಾಗಿದೆ,” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟಿನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಮುಕ್ಕಾ ಮಾತನಾಡಿ, “ಡಾ. ಸಾಬಣ್ಣ ಅವರ ಈ ವರದಿ ಸಮಾಜಕ್ಕೆ ದಿಕ್ಕು ತೋರಿಸುವಂತಿದೆ. ಇದನ್ನು ಹೇಗೆ ಉಪಯೋಗಿಸಿಕೊಳ್ಳುವುದು ಎಂಬುದು ರಾಜಕೀಯ ಮುಖಂಡರು ಮತ್ತು ಹೋರಾಟಗಾರರ ಕೈಯಲ್ಲಿದೆ. ಸಮಾಜದ ಹಿತಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಶಿಕಲಾ ಸುಣಗಾರ್ ಪ್ರಾರ್ಥನೆ ಗೀತೆ ಹಾಡಿದರು. ಡಾ. ರಾಮಕೃಷ್ಣ ಬಿ. ಸ್ವಾಗತಿಸಿದರು, ಎಸ್. ಶಾಮಕುಮಾರ ಪ್ರಾಸ್ತಾವಿಕ ಭಾಷಣ ಮಾಡಿದರು, ಮಲ್ಲಪ್ಪ ಮಾನೆಗರ್ ವಂದನಾರ್ಪಣೆ ಮಾಡಿದರು ಹಾಗೂ ಯಲ್ಲಪ್ಪ ತಳವಾರ ನಿರೂಪಣೆ ನಡೆಸಿದರು.
ಈ ಸಂದರ್ಭದಲ್ಲಿ ಕೋಲಿ–ಕಬ್ಬಲಿಗ ಸಮಾಜದ ಚಿಂತಕರು, ಮುಖಂಡರು, ಸರ್ಕಾರಿ ನೌಕರರು, ಮಹಿಳೆಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜದ ಮುಂದಿನ ಹೋರಾಟದ ಮಾರ್ಗದ ಬಗ್ಗೆ ಚರ್ಚಿಸಿದರು.



