ರಾಜ್ಯ

ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆ ಸಿದ್ಧ

ಶೇ.75 ನೇಮಕಾತಿಗೆ ವಿಧೇಯಕ ಜಾರಿಗೆ ಸರ್ಕಾರ ಸಜ್ಜು

ಬೆಂಗಳೂರು: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಈ ಸಂಬಂಧ ಕಾನೂನು ಜಾರಿಗೆ ತರಲು ದೃಢ ನಿರ್ಧಾರ ಕೈಗೊಂಡಿದೆ.

ಈ ಹಿಂದೆಯೇ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ಸರ್ಕಾರ ಸಿದ್ಧಪಡಿಸಿತ್ತು. ಆದರೆ ತಾಂತ್ರಿಕ ಹಾಗೂ ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ಅದನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಇದೀಗ ವಿವಿಧ ಸಂಘಟನೆಗಳು ಹಾಗೂ ಕನ್ನಡ ಪರ ಹೋರಾಟಗಾರರ ಒತ್ತಾಯಗಳಿಗೆ ಮಣಿದಿರುವ ಸರ್ಕಾರ, ಹಿಂದೆಯೇ ತಡೆಹಿಡಿಯಲಾಗಿದ್ದ ಕರ್ನಾಟಕ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ವಿಧೇಯಕವನ್ನು ಮತ್ತೆ ಜಾರಿಗೆ ತರಲು ಮುಂದಾಗಿದೆ.

ಕಳೆದ ವರ್ಷವೇ ಈ ವಿಧೇಯಕವನ್ನು ಸಿದ್ಧಪಡಿಸಿದ್ದರೂ ಕೆಲವು ಆಕ್ಷೇಪಣೆಗಳ ಕಾರಣ ಜಾರಿಯಾಗಿರಲಿಲ್ಲ. ಇದೀಗ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಸರ್ಕಾರ ಮತ್ತೊಮ್ಮೆ ವಿಧೇಯಕವನ್ನು ಮುಂದಿಟ್ಟಿದ್ದು, ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಸಚಿವ ಸಂಪುಟದ ಒಪ್ಪಿಗೆ ಸಿಕ್ಕಲ್ಲಿ ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯುವ ಯೋಜನೆ ಸರ್ಕಾರ ಹೊಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಧೇಯಕದ ಪ್ರಮುಖ ಅಂಶಗಳಂತೆ, ಖಾಸಗಿ ವಲಯಗಳಲ್ಲಿ ಒಟ್ಟು ಶೇ.75ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡಬೇಕಾಗಿದೆ. ಆಡಳಿತಾತ್ಮಕ ಹಾಗೂ ಉನ್ನತ ಹುದ್ದೆಗಳಲ್ಲಿ (ತಾಂತ್ರಿಕ, ಕೌಶಲ್ಯಾಧಾರಿತ ಹುದ್ದೆಗಳು ಸೇರಿದಂತೆ) ಶೇ.50ರಷ್ಟು ಸ್ಥಾನಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು. ಅದೇ ರೀತಿ ಆಡಳಿತೇತರ ಹುದ್ದೆಗಳಾದ ಸಿ ಮತ್ತು ಡಿ ಗ್ರೂಪ್ ವ್ಯಾಪ್ತಿಗೆ ಬರುವ ಗುಮಾಸ್ತ, ಕೌಶಲ್ಯ ರಹಿತ ಹಾಗೂ ಇತರೆ ಹುದ್ದೆಗಳಲ್ಲಿ ಶೇ.75ರಷ್ಟು ಮೀಸಲಾತಿ ನೀಡುವ ಅಂಶಗಳನ್ನು ವಿಧೇಯಕ ಒಳಗೊಂಡಿದೆ.

ದಂಡ ವಿಧಿಸುವ ಪ್ರಾವಧಾನ:
ವಿಧೇಯಕ ಜಾರಿಯಾದ ಬಳಿಕ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡದ ಸಂಸ್ಥೆಗಳು ಹಾಗೂ ಉದ್ಯಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮೀಸಲಾತಿ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಪ್ರಾವಧಾನವೂ ಈ ಕಾಯ್ದೆಯಲ್ಲಿ ಸೇರಿಸಲಾಗಿದೆ.

ಕಾನೂನಿನ ಪ್ರಕಾರ ಕರ್ನಾಟಕದಲ್ಲಿ ಜನಿಸಿದವರು ಅಥವಾ ಕನಿಷ್ಠ 15 ವರ್ಷ ಕರ್ನಾಟಕದಲ್ಲಿ ವಾಸಿಸಿರುವವರು ಕನ್ನಡಿಗರಾಗಿದ್ದು, ಅವರಿಗೆ ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ತಿಳಿದಿರಬೇಕು. ಒಂದು ವೇಳೆ 15 ವರ್ಷ ವಾಸವಿದ್ದರೂ ಕನ್ನಡ ಜ್ಞಾನ ಇಲ್ಲದಿದ್ದರೆ, ನೋಡಲ್ ಏಜೆನ್ಸಿ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ.

ಕಳೆದ ಜುಲೈ ತಿಂಗಳಲ್ಲೇ ಈ ಕಾಯ್ದೆ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದ್ದರೂ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಇದೀಗ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ವಿಧೇಯಕ ಸಿದ್ಧಗೊಂಡಿದ್ದು, ಜಾರಿಯಾದರೆ ರಾಜ್ಯದಲ್ಲಿ ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗಲಿದ್ದು, “ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ” ಎಂಬ ದೂರುಗಳು ಗಣನೀಯವಾಗಿ ಕಡಿಮೆಯಾಗಲಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button