ರಾಜ್ಯ

ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಶಿವಲಿಂಗಪ್ಪ ಕಿನ್ನೂರ ಒಮ್ಮತದಿಂದ ಆಯ್ಕೆ

ಬೆಳಗಾವಿ: ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಶ್ರೀ ಶಿವಲಿಂಗಪ್ಪ ಕಿನ್ನೂರ ಅವರನ್ನು ಏಕಮತದಿಂದ ಆಯ್ಕೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂನಲ್ಲಿ ನಡೆದ ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಅಧಿವೇಶನದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಪಕ್ಷದ ಸಂಸ್ಥಾಪಕ ಸದಸ್ಯರಾದ ಸಿದ್ಧಪ್ಪ ಅಕ್ಕಿಸಾಗರ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ ಹಾಲಿ ರಾಷ್ಟ್ರೀಯ ಅಧ್ಯಕ್ಷ ಮಹಾದೇವ್ ಜಾನಕರ ಅವರು ತಮ್ಮ ಕಾರ್ಯಾವಧಿ ಪೂರ್ಣಗೊಂಡಿರುವುದಾಗಿ ಘೋಷಿಸಿದರು.

ಬಳಿಕ ಮನೋಜ್ ನಿಗಡಕರ ಅವರು ಪಕ್ಷದ ಹಿರಿಯ ನಾಯಕ ಶಿವಲಿಂಗಪ್ಪ ಕಿನ್ನೂರ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಬಾಳಕೃಷ್ಣ ಲೆಂಗ್ರೆ ಮಾಮಾ ಅವರು ಅದಕ್ಕೆ ಅನುಮೋದನೆ ನೀಡಿದರು. ಈ ಹಿನ್ನೆಲೆಯಲ್ಲಿ ಶಿವಲಿಂಗಪ್ಪ ಕಿನ್ನೂರ ಅವರನ್ನು ಏಕಮತದಿಂದ ರಾಷ್ಟ್ರೀಯ ಅಧ್ಯಕ್ಷರಾಗಿ ಘೋಷಿಸಲಾಯಿತು.

ಆಯ್ಕೆ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮಹಾದೇವ್ ಜಾನಕರ, ಬಾಳಕೃಷ್ಣ ಲೆಂಗ್ರೆ ಮಾಮಾ, ಕುಮಾರ್ ಸುಶೀಲ್, ಮನೋಜ್ ನಿಗಡಕರ, ಶಿವಲಿಂಗಪ್ಪ ಜೋಗಿನ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಷ್ಟ್ರೀಯ ಅಧಿವೇಶನದಲ್ಲಿ ಒಂದು ದೇಶ–ಒಂದು ಶಿಕ್ಷಣ, ಜಾತಿ ಆಧಾರಿತ ಜನಗಣತಿ, ಎಲ್ಲರಿಗೂ ಉಚಿತ ಆರೋಗ್ಯ ಸೇವೆ, ರೈತರಿಗೆ ಉಚಿತ ವಿದ್ಯುತ್ ಸೇರಿದಂತೆ ಹಲವು ಪ್ರಮುಖ ನೀತಿ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಕರ್ನಾಟಕದ ಕಲಬುರಗಿ ಜಿಲ್ಲೆಯ ನಿವಾಸಿಯಾದ ಶಿವಲಿಂಗಪ್ಪ ಕಿನ್ನೂರ ಅವರು ಕೋಲಿ ಸಮಾಜದ ಹಿರಿಯ ನಾಯಕರೆಂದು ಗುರುತಿಸಿಕೊಂಡಿದ್ದಾರೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೇವರ್ಗಿ ಕ್ಷೇತ್ರದಿಂದ ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಿದ ಅತ್ಯಂತ ಹಿರಿಯ ವಯಸ್ಸಿನ ಅಭ್ಯರ್ಥಿಯಾಗಿದ್ದರು.

ಶಿವಲಿಂಗಪ್ಪ ಕಿನ್ನೂರ ಅವರ ಆಯ್ಕೆಯಿಂದ ರಾಷ್ಟ್ರೀಯ ಸಮಾಜ ಪಕ್ಷವು ಕೋಳಿ ಸಮಾಜಕ್ಕೆ ರಾಷ್ಟ್ರಮಟ್ಟದ ನಾಯಕತ್ವದ ಅವಕಾಶ ನೀಡಿದೆ ಎಂಬ ಅಭಿಪ್ರಾಯವನ್ನು ಅಧಿವೇಶನದಲ್ಲಿ ಪಾಲ್ಗೊಂಡವರು ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button