ಮಹಿಳೆಯರೆ ಮರೆತ ಮಹಾನ್ ಮಹಿಳೆ!

ಲೇಖನ:ರಾಜು ಮುದ್ದಡಗಿ
ಸಾವಿತ್ರಿಬಾಯಿ ಫುಲೆ (ಜನವರಿ 3, 1831 – ಮಾರ್ಚ್ 10, 1897) ಭಾರತದ ಮೊದಲ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ ಮತ್ತು ಮಹಿಳಾ ವಿಮೋಚನೆಯ ದೀಪಸ್ತಂಭ. ಮಹಾರಾಷ್ಟ್ರದ ನೈಗಾಂವ್‌ನಲ್ಲಿ ಜನಿಸಿದ ಅವರು, ಬಾಲ್ಯವಿವಾಹದ ನಂತರ ಪತಿ ಮಹಾತ್ಮ ಜ್ಯೋತಿರಾವ್ ಫುಲೆ ಅವರ ಪ್ರೇರಣೆಯಿಂದ ಶಿಕ್ಷಣ ಪಡೆದು, 1848ರಲ್ಲಿ ಪುಣೆಯ ಭಿಡೆ ವಾಡಾದಲ್ಲಿ ಬಾಲಕಿಯರಿಗಾಗಿ ಭಾರತದ ಮೊದಲ ಶಾಲೆಯನ್ನು ಆರಂಭಿಸಿದರು. ಹೆಣ್ಣುಮಕ್ಕಳಿಗೆ ಅಕ್ಷರವೇ ಅಪರಾಧವಾಗಿದ್ದ ಕಾಲದಲ್ಲಿ ಇದು ಸಮಾಜದ ಸಂಪ್ರದಾಯಗಳಿಗೆ ಎಸೆದ ಸವಾಲಾಗಿತ್ತು.
ಶಾಲೆಗೆ ಹೋಗುವ ದಾರಿಯಲ್ಲಿ ಸಮಾಜದ ಸಂರಕ್ಷಣೆಯ ಹೆಸರಿನಲ್ಲಿ ನಿಂತವರು ಸಾವಿತ್ರಿಬಾಯಿ ಮೇಲೆ ಸಗಣಿ, ಕೆಸರು ಮತ್ತು ಕಲ್ಲುಗಳನ್ನು ಎರಚಿದರು. ಆದರೆ ಅವರು ಹಿಂದೆ ಸರಲಿಲ್ಲ. ಮತ್ತೊಂದು ಸೀರೆ ಹೊತ್ತುಕೊಂಡು ಹೋಗಿ, ಅವಮಾನವನ್ನು ಮೌನವಾಗಿ ಸಹಿಸಿ ಪಾಠ ಮಾಡಿದ ಅವರ ಧೈರ್ಯ, ಮಹಿಳಾ ಹೋರಾಟದ ಅತ್ಯುನ್ನತ ರೂಪವಾಗಿತ್ತು. ಶಿಕ್ಷಣವನ್ನು ಅವರು ಉದ್ಯೋಗದ ಸಾಧನವಾಗಿ ಅಲ್ಲ, ಆತ್ಮಗೌರವ ಮತ್ತು ಸಮಾನತೆಯ ಅಸ್ತ್ರವಾಗಿ ನೋಡಿದರು.
ವಿಧವೆಯರ ಕೇಶಮುಂಡನ ವಿರೋಧ, ಅತ್ಯಾಚಾರಪೀಡಿತ ಮಹಿಳೆಯರಿಗಾಗಿ ಆಶ್ರಯಗೃಹ, ಕಾಶಿಬಾಯಿ ಹೆತ್ತ ಮಗುವಾದ ಯಶವಂತನ ದತ್ತು ಮತ್ತು ಅಂತರ್ಜಾತಿ ವಿವಾಹ-ಇವೆಲ್ಲ ಸಾವಿತ್ರಿಬಾಯಿ ಅವರ ಮಾನವೀಯ ಹಾಗೂ ವೈಜ್ಞಾನಿಕ ಚಿಂತನೆಯ ಸಾಕ್ಷ್ಯಗಳು. 1897ರ ಪ್ಲೇಗ್ ಮಹಾಮಾರಿಯ ಸಂದರ್ಭದಲ್ಲಿ, 66ರ ವಯಸ್ಸಿನಲ್ಲೂ ರೋಗಿಗಳ ಸೇವೆಗೆ ಇಳಿದು, ಪಾಂಡುರಂಗ ಗಾಯಕ್ಕಾಡ್ ಎಂಬ ಮಗುವನ್ನು ರಕ್ಷಿಸಲು ಹೋಗಿ ಸೋಂಕಿನಿಂದ ಮಡಿದುದು, ಅವರ ಬದುಕು ಉಪದೇಶವಲ್ಲ-ಬಲಿದಾನ ಎಂಬುದನ್ನು ಸಾಬೀತುಪಡಿಸುತ್ತದೆ.
ಇಂದು ಮಹಿಳೆಯರು ಶಿಕ್ಷಣ, ಉದ್ಯೋಗ ಮತ್ತು ಸಾಧನೆಯ ಹಲವು ಶಿಖರಗಳನ್ನು ಏರಿದ್ದಾರೆ. ಆದರೆ, ಸಾವಿತ್ರಿಬಾಯಿ ಪ್ರತಿನಿಧಿಸಿದ ಆತ್ಮಗೌರವ, ಸಮಾನತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ನಾವು ಎಷ್ಟು ನೆನಪಿಟ್ಟಿದ್ದೇವೆ? ಅವರ ಹೆಸರು ಜಯಂತಿಗಳಿಗಷ್ಟೇ ಸೀಮಿತವಾದರೆ, ಅದು ಮತ್ತೊಂದು ಮರೆವು.
ಸಾವಿತ್ರಿಬಾಯಿ ಫುಲೆ ಮಹಿಳೆಯರಿಗಷ್ಟೇ ಅಲ್ಲ, ಸಂಪೂರ್ಣ ಸಮಾಜಕ್ಕೆ ದಿಕ್ಕು ತೋರಿದ ಮಹಾನ್ ಮಹಿಳೆ. ಅವರನ್ನು ನೆನಪಿಸಿಕೊಳ್ಳುವುದು ಆಚರಣೆಯಲ್ಲ; ಅವರು ಹೋರಾಡಿದ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ಅವರ ಸ್ಮರಣೆಗೆ ಸಾರ್ಥಕತೆ.


