ರಾಷ್ಟ್ರಮಟ್ಟದಲ್ಲಿ ಕಲಬುರಗಿಯ ಮೆರಗು: ಖರ್ಗೆ–ಕಿನ್ನೂರಿಂದ ಮೂಡಿದ ಹೊಸ ರಾಜಕೀಯ ಇತಿಹಾಸ

ಕರ್ನಾಟಕದ ಕಲಬುರಗಿ ಜಿಲ್ಲೆ ಇತ್ತೀಚಿನ ವರ್ಷಗಳಲ್ಲಿ ಕೇವಲ ಪ್ರಾದೇಶಿಕ ಮಹತ್ವಕ್ಕೆ ಸೀಮಿತವಾಗದೇ, ರಾಷ್ಟ್ರಮಟ್ಟದ ರಾಜಕೀಯ ಚರ್ಚೆಯ ಕೇಂದ್ರಬಿಂದು ಆಗಿ ಹೊರಹೊಮ್ಮುತ್ತಿದೆ. ಇದರ ಪ್ರಮುಖ ಕಾರಣ, ಎರಡು ವಿಭಿನ್ನ ರಾಷ್ಟ್ರೀಯ ರಾಜಕೀಯ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷ ಸ್ಥಾನಗಳು ಒಂದೇ ಜಿಲ್ಲೆಗೆ ಒಲಿದು ಬಂದಿರುವ ಅಪರೂಪದ ಐತಿಹಾಸಿಕ ಬೆಳವಣಿಗೆ. ಇದು ಕಲಬುರಗಿಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿದೆ.
ಒಂದು ಕಡೆ, ದೇಶದ ಅತ್ಯಂತ ಪುರಾತನ ಹಾಗೂ ಬಲಿಷ್ಠ ಪಕ್ಷವಾದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ; ಮತ್ತೊಂದು ಕಡೆ, ಸಮಾಜಮುಖಿ ರಾಜಕಾರಣದ ಧ್ವನಿಯಾಗಿ ಗುರುತಿಸಿಕೊಂಡಿರುವ ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಶಿವಲಿಂಗಪ್ಪ ಕಿನ್ನೂರ್ ಅವರ ಆಯ್ಕೆ ಈ ಎರಡು ಸಾಧನೆಗಳು ಕಲಬುರಗಿಯನ್ನು ರಾಷ್ಟ್ರಮಟ್ಟದ ನಾಯಕತ್ವದ ಶಕ್ತಿಕೇಂದ್ರವನ್ನಾಗಿ ರೂಪಿಸಿವೆ.
ಮಲ್ಲಿಕಾರ್ಜುನ ಖರ್ಗೆ ಅವರು ದಶಕಗಳ ರಾಜಕೀಯ ಅನುಭವ, ಸಂಸತ್ತಿನ ಗಟ್ಟಿದ ಧ್ವನಿ ಮತ್ತು ಸಾಮಾಜಿಕ ನ್ಯಾಯದ ನಿರಂತರ ಹೋರಾಟದ ಹಿನ್ನೆಲೆಯೊಂದಿಗೆ ಕಾಂಗ್ರೆಸ್ ಪಕ್ಷದ ಅತ್ಯುನ್ನತ ಸ್ಥಾನಕ್ಕೇರಿದ್ದಾರೆ. ಕಲಬುರಗಿಯ ನೆಲದಿಂದ ಆರಂಭವಾದ ಅವರ ರಾಜಕೀಯ ಪಯಣ ರಾಷ್ಟ್ರಮಟ್ಟದ ನಾಯಕತ್ವದವರೆಗೆ ವಿಸ್ತರಿಸಿರುವುದು, ಜಿಲ್ಲೆಯ ಅನೇಕ ಯುವಕರಿಗೆ ಪ್ರೇರಣೆಯ ದೀಪವಾಗಿದೆ.
ಅದೇ ರೀತಿ, ನೆಲಮಟ್ಟದ ಹೋರಾಟಗಳಿಂದಲೇ ಬೆಳೆದ ಶಿವಲಿಂಗಪ್ಪ ಕಿನ್ನೂರ ಅವರು ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವುದು, ಪರ್ಯಾಯ ಹಾಗೂ ಸಮಾಜಮುಖಿ ರಾಜಕಾರಣಕ್ಕೆ ಕಲಬುರಗಿಯಿಂದ ಹೊಸ ಶಕ್ತಿ ದೊರೆತಂತಾಗಿದೆ. ಶ್ರಮಿಕರು, ಹಿಂದುಳಿದ ವರ್ಗಗಳು ಮತ್ತು ನಿರ್ಲಕ್ಷಿತ ಸಮುದಾಯಗಳ ಪರ ಅಚಲ ಧ್ವನಿಯಾಗಿ ಗುರುತಿಸಿಕೊಂಡಿರುವ ಕಿನ್ನೂರ ಅವರ ನಾಯಕತ್ವ, ರಾಜಕೀಯದಲ್ಲಿ ಮೌಲ್ಯಾಧಾರಿತ ಹೋರಾಟಕ್ಕೂ ಸ್ಥಾನವಿದೆ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.
ಇದು ಕೇವಲ ಇಬ್ಬರು ವ್ಯಕ್ತಿಗಳ ವೈಯಕ್ತಿಕ ಸಾಧನೆ ಅಲ್ಲ. ಇದು ಕಲಬುರಗಿಯ ಸಾಮಾಜಿಕ–ರಾಜಕೀಯ ಚೇತನ, ಹೋರಾಟದ ಪರಂಪರೆ ಮತ್ತು ಚಿಂತನೆಯ ಪ್ರತಿಫಲನ. ಇತಿಹಾಸದಿಂದಲೂ ಚಳವಳಿ, ಹೋರಾಟ ಮತ್ತು ಸಾಮಾಜಿಕ ಜಾಗೃತಿಯ ನೆಲೆಯಾಗಿರುವ ಈ ಪ್ರದೇಶ, ಇಂದು ರಾಷ್ಟ್ರಮಟ್ಟದ ರಾಜಕೀಯ ದಿಕ್ಕು ನಿರ್ಧಾರದಲ್ಲಿ ಪಾತ್ರವಹಿಸುವ ಹಂತಕ್ಕೆ ಬಂದಿರುವುದು ಅತ್ಯಂತ ಗಮನಾರ್ಹ.
ಭಿನ್ನ ರಾಜಕೀಯ ಧಾರೆಯ ನಾಯಕರು, ಆದರೆ ಒಂದೇ ನೆಲ. ಸಾಮಾಜಿಕ ನ್ಯಾಯ, ಸಮಾನತೆ, ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ಎಂಬ ಸಾಮಾನ್ಯ ನೆಲೆ ಇದೇ ಕಲಬುರಗಿಯನ್ನು ರಾಜಕೀಯವಾಗಿ ವಿಶಿಷ್ಟವಾಗಿಸುವ ಅಂಶ.
ಶಿವಲಿಂಗಪ್ಪ ಕಿನ್ನೂರ್: ಸಾಮಾಜಿಕ ಚಳವಳಿಯಿಂದ ರಾಷ್ಟ್ರಮಟ್ಟದ ನಾಯಕತ್ವದವರೆಗೆ

“ಗ್ರಾಮೀಣ ಮಣ್ಣಿನ ಹೋರಾಟದಿಂದ ರಾಷ್ಟ್ರಮಟ್ಟದ ನಾಯಕತ್ವದವರೆಗೆ ಸಾಗಿದ ಶಿವಲಿಂಗಪ್ಪ ಕಿನ್ನೂರ್, ಶ್ರಮಜೀವಿ–ನಿರ್ಲಕ್ಷಿತ ವರ್ಗಗಳ ಧ್ವನಿಯಾಗಿ ಸರಳತೆ, ಸೇವೆ ಮತ್ತು ಸಾಮಾಜಿಕ ನ್ಯಾಯದ ರಾಜಕಾರಣಕ್ಕೆ ಹೊಸ ಅರ್ಥ ನೀಡಿದ್ದಾರೆ.
ಅಧಿಕಾರಕ್ಕಿಂತ ಮೌಲ್ಯಗಳನ್ನು ಮೇಲುಗೈ ಮಾಡಿರುವ ಅವರ ಪಯಣವೇ, ಹೋರಾಟವೇ ರಾಜಕೀಯ ಎಂಬುದಕ್ಕೆ ಜೀವಂತ ಸಾಕ್ಷಿ.”
ಸಮಾಜ ಪರಿವರ್ತನೆ ಮಾತಿನಿಂದ ಸಾಧ್ಯವಲ್ಲ; ಅದು ತ್ಯಾಗ, ಹೋರಾಟ ಮತ್ತು ನಿರಂತರ ಹಠದಿಂದ ಮಾತ್ರ ಸಾಧ್ಯ. ಈ ಸತ್ಯವನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ ನಾಯಕರೆಂದರೆ ಶಿವಲಿಂಗಪ್ಪ ಕಿನ್ನೂರ್. ದಶಕಗಳ ಕಾಲ ಸಾಮಾಜಿಕ ನ್ಯಾಯಕ್ಕಾಗಿ ದುಡಿದ ಅವರ ಹೋರಾಟದ ಬದುಕಿಗೆ ಇಂದು ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಎಂಬ ಗೌರವ ದೊರೆತಿದೆ.
ಗ್ರಾಮೀಣ ಬದುಕಿನ ಮಣ್ಣಿನ ವಾಸನೆ ಹೊತ್ತ, ಶ್ರಮಜೀವಿಗಳ ನೋವು–ನಲಿವನ್ನು ಹತ್ತಿರದಿಂದ ಅರಿತ ಕಿನ್ನೂರ್ ಅವರ ಪಯಣ ಸಾಮಾನ್ಯವಲ್ಲ. ಅಸಮಾನತೆ, ಅನ್ಯಾಯ ಮತ್ತು ಶೋಷಣೆಯನ್ನು ಕಂಡು ಮೌನವಾಗಿರದೇ, ಪ್ರಶ್ನಿಸುವುದನ್ನೇ ತಮ್ಮ ಬದುಕಿನ ಧರ್ಮವನ್ನಾಗಿ ಮಾಡಿಕೊಂಡವರು ಅವರು.
ರಾಜಕೀಯ ವೇದಿಕೆಗಳಿಗೆ ಮಾತ್ರ ಸೀಮಿತವಾಗದೇ, ಸಾಮಾಜಿಕ ಚಳವಳಿಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ ಅವರ ಹಾದಿ, ಹೋರಾಟದ ಶಾಲೆಯಂತಿದೆ. ಹಿಂದುಳಿದ ವರ್ಗಗಳು, ಶ್ರಮಿಕ ಸಮುದಾಯಗಳು ಮತ್ತು ನಿರ್ಲಕ್ಷಿತ ಜನವರ್ಗಗಳಿಗೆ ಸಾಮಾಜಿಕ–ರಾಜಕೀಯ ಗೌರವ ಸಿಗಬೇಕು ಎಂಬುದೇ ಅವರ ಚಿಂತನೆಯ ಮೂಲ. ಈ ಚಿಂತನೆ ಮಾತಿನಲ್ಲಿ ಮಾತ್ರವಲ್ಲ, ಅವರ ನಡೆದು ಬಂದ ದಾರಿಯಲ್ಲೇ ಸ್ಪಷ್ಟವಾಗಿ ಕಾಣಿಸುತ್ತದೆ.
ರಾಷ್ಟ್ರೀಯ ಸಮಾಜ ಪಕ್ಷದೊಂದಿಗೆ ಅವರ ಪಯಣ ಪಕ್ಷಕ್ಕೆ ಹೊಸ ದಿಕ್ಕು ನೀಡಿದೆ. ಸಂಘಟನೆಗೆ ಶಿಸ್ತು, ರಾಜಕಾರಣಕ್ಕೆ ತತ್ವ ಮತ್ತು ನಾಯಕತ್ವಕ್ಕೆ ಸೇವಾಭಾವ ಇವು ಕಿನ್ನೂರ್ ಅವರ ಪ್ರಮುಖ ಲಕ್ಷಣಗಳು. ತಳಮಟ್ಟದ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮನೋಭಾವ ಮತ್ತು ಅಧಿಕಾರಕ್ಕಿಂತ ಸೇವೆಗೆ ಹೆಚ್ಚಿನ ಆದ್ಯತೆ ನೀಡುವ ಗುಣ, ಅವರನ್ನು ಜನಮನದ ನಾಯಕನನ್ನಾಗಿ ರೂಪಿಸಿದೆ.
ಅಧಿಕಾರ ಮತ್ತು ಸ್ಥಾನಮಾನಗಳು ಅವರನ್ನು ಬದಲಾಯಿಸಿಲ್ಲ. ಸರಳತೆ ಅವರ ಅತಿದೊಡ್ಡ ಶಕ್ತಿ. ಇಂದಿಗೂ ಅವರು ಸಾಮಾನ್ಯ ಜನರ ನಡುವೆ ಸಾಮಾನ್ಯನಂತೆ ಕಾಣಿಸಿಕೊಳ್ಳುತ್ತಾರೆ ಇದೇ ಜನರು ಅವರ ಮೇಲೆ ಇಟ್ಟಿರುವ ನಂಬಿಕೆಯ ಮೂಲ.
ಭವಿಷ್ಯದ ನಿರೀಕ್ಷೆ ಮತ್ತು ಹಾರೈಕೆ
ಇಂದು ರಾಷ್ಟ್ರಮಟ್ಟದ ಜವಾಬ್ದಾರಿಯನ್ನು ಹೊತ್ತಿರುವ ಶಿವಲಿಂಗಪ್ಪ ಕಿನ್ನೂರ್ ಅವರಿಂದ ಸಮಾಜಕ್ಕೆ ಇನ್ನಷ್ಟು ನಿರೀಕ್ಷೆಗಳಿವೆ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶ್ರಮಜೀವಿಗಳ ಹಕ್ಕುಗಳ ರಕ್ಷಣೆಯಲ್ಲಿ ಅವರು ಇನ್ನಷ್ಟು ಬಲವಾದ ಹೋರಾಟ ನಡೆಸಲಿ ಎಂಬ ಆಶಯ ಎಲ್ಲರಲ್ಲೂ ಇದೆ.
ಕಲಬುರಗಿ ಇನ್ನು ಮುಂದೆ ಕೇವಲ ಒಂದು ಜಿಲ್ಲೆಯಾಗಿರದೇ, ರಾಷ್ಟ್ರಮಟ್ಟದ ನಾಯಕತ್ವ ಹುಟ್ಟುವ ಶಕ್ತಿಕೇಂದ್ರ ಎಂಬ ಸಂದೇಶವನ್ನು ದೇಶದಾದ್ಯಂತ ಸಾರುತ್ತಿದೆ. ಈ ಐತಿಹಾಸಿಕ ಕ್ಷಣವನ್ನು ಜಿಲ್ಲೆಯ ಜನತೆ ಹೆಮ್ಮೆಯಿಂದ ಆಚರಿಸಬಹುದು.
ಸಾಮಾಜಿಕ ನ್ಯಾಯದ ಹೋರಾಟ ಇನ್ನಷ್ಟು ಗಟ್ಟಿಯಾಗಲಿ, ರಾಷ್ಟ್ರದ ರಾಜಕೀಯಕ್ಕೆ ಹೊಸ ದಿಕ್ಕು ಸಿಗಲಿ ಎಂಬ ಹಾರೈಕೆಯೊಂದಿಗೆ .



