ಲೇಖನ

“ಮಹಾ ಪರಿನಿರ್ವಾಣ ದಿನ: ಮಾನವ ಮುಕ್ತಿಯ ದರ್ಶಕ ಡಾ. ಬಿ.ಆರ್. ಅಂಬೇಡ್ಕರ್‌ಗೆ ಶ್ರದ್ಧಾಂಜಲಿ”

ಇಂದು ನಾವು ಮಹಾ ಪರಿನಿರ್ವಾಣ ದಿನವನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ದೈವಾಧೀನರಾದ ನಮ್ಮನ್ನು ಅಗಲಿದ ಕರಾಳ ದಿನ ಆಚರಿಸುತ್ತಿದ್ದೇವೆ. ಭಾರತ ದೇಶದ ಕಟ್ಟಕಡೆಯ ವ್ಯಕ್ತಿಯ ಅಂತರಾಳದಲ್ಲಿ ಪ್ರಗತಿಯ ಕಿಚ್ಚನ್ನು ಹೊತ್ತಿ, ಮಾನವ ಮುಕ್ತಿಯ ದಾರಿಯನ್ನು ತೋರಿದ, ಅಜ್ಞಾನ-ಅಸಮಾನತೆಯನ್ನು ಅಳಿಸಿ ವೈಜ್ಞಾನಿಕ ವಿಮರ್ಶಾತ್ಮಕ ಚಿಂತನೆಯ ಬೆಳಕನ್ನು ಹರಿಸಿದ ಮಹಾನ್ ಮಾನವತಾವಾದಿ, ಶ್ರೇಷ್ಠ ವಿದ್ವಾಂಸ, ರಾಜಕೀಯ ತಾತ್ತ್ವಿಕ, ಆರ್ಥಿಕ ಮುತ್ಸದ್ದಿ ಹಾಗೂ ಭಾರತದ ಸಂವಿಧಾನದ ಶಿಲ್ಪಿ-ಡಾ. ಭೀಮರಾವ್ ರಾಮಜಿ ಅಂಬೇಡ್ಕರ್ ಅವರನ್ನು ಸ್ಮರಿಸುವ ಪವಿತ್ರ ದಿನ ಇದು.

1891 ಏಪ್ರಿಲ್ 14ರಂದು ಮಹೂವಿನಲ್ಲಿ ಭೀಮಾಬಾಯಿ ಮತ್ತು ರಾಮಜೀ ಮಾಲೋಜಿ ದಂಪತಿಗಳಿಗೆ ಜನಿಸಿದ ಈ ಮಹಾನ್ ಚಿಂತಕ, ಮಾಹರ್ ಸಮುದಾಯದ ಮೇಲಿನ ಜಾತಿ ಕ್ರೌರ್ಯದ ಕತ್ತಲೆಯ ನಡುವೆ ಆಶಾಕಿರಣವಾಗಿ ಉದಯಿಸಿದರು. ಬಾಲ್ಯದಿಂದಲೇ ಅವಮಾನ, ಅಸ್ಪೃಶ್ಯತೆ, ದಾಸ್ಯ, ಮೂಢನಂಬಿಕೆ-ಇವೆಲ್ಲ ಅವರ ಬದುಕಿನ ಕರಿ ನೆರಳಾಗಿದ್ದವು,ಈ ಯಾತನೆಗಳು, ಅವಮಾನ, ಶೋಷಣೆ ಮತ್ತು ಅಸಮಾನತೆ ಅವರನ್ನು ಮತ್ತಿಷ್ಟು ಕಟ್ಟಿಗೊಳಿಸಿತ್ತು.ಅವರಲ್ಲಿ ಓದಿ-ತಿಳಿದು-ಬರೆದು, ಸನಾತನವಾದಿಗಳ ಕುತಂತ್ರವನ್ನು ಬಯಲಿಗೆಳೆಯಬೇಕು ಎಂಬ ಬಯಕೆಯು ಹೆಮ್ಮರವಾಗಿ ಜ್ವಾಲೆಯಂತೆ ಜಾಗೃತಿಯನ್ನು ಮೂಡಿಸಿತು.

ಎಲ್ಫಿನ್ಸ್ಟನ್ ಕಾಲೇಜಿನಿಂದ ಕೊಲಂಬಿಯಾ ವಿಶ್ವವಿದ್ಯಾಲಯದವರೆಗೆ, ಅಲ್ಲಿಂದ ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್‌ವರೆಗೆ ಸಾಗಿದ ಅವರ ವಿದ್ಯಾಭ್ಯಾಸ ಜಗತ್ತೇ ಬೆರಗುಗೊಳ್ಳುವ ಸಾಧನೆ. 32 ಪದವಿಗಳು, ಅನೇಕ ಡಾಕ್ಟರೇಟ್‌ಗಳು ಮತ್ತು ಅನವರತ ಜ್ಞಾನತಪಸ್ಸು-ಇವೆಲ್ಲವು ಅವರನ್ನು ವಿಶ್ವದ ಅಪರೂಪದ ಬೌದ್ಧಿಕ ನಾಯಕರ ಸಾಲಿನಲ್ಲಿ ನಿಲ್ಲಿಸಿದವು. ಆದರೆ ಈ ಪಯಣ ಹೂವಿನ ಹಾದಿಯಲ್ಲ, ಜಾತಿಯ ವಿಷಮತೆಯ ಮುಳ್ಳುಬೇಲಿನಲ್ಲೇ ಸಾಗಿತ್ತು: ಶಾಲೆಯಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲ, ನೀರು ಕುಡಿಯಲು ನಿರ್ಬಂಧ, ಸಂಚರಿಸಲು ನಿಷೇಧ, ಪ್ರಯಾಣಕ್ಕೆ ತಡೆ ಈ ಎಲ್ಲ ಕಹಿ ಅನುಭವಗಳು ಅವರನ್ನು ಇನ್ನಷ್ಟು ದೃಢಗೊಳಿಸಿದವು.

ಮಹಾಡ್ ಸತ್ಯಾಗ್ರಹ, ಕಾಲಾರಾಂ ದೇವಸ್ಥಾನ ಪ್ರವೇಶ, ಚವ್ದಾರ್ ಕೆರೆಯ ನೀರಿನ ಸ್ಪರ್ಶ, ಮನು ಸ್ಮೃತಿ ದಹನ ಇವೆಲ್ಲವು ಪುರೋಹಿತಶಾಹಿ ಮತ್ತು ಜಾತಿವಾದಿ ಶಕ್ತಿಗಳಿಗೆ ಸವಾಲೊಡ್ಡಿದ ಐತಿಹಾಸಿಕ ಹೋರಾಟಗಳು. ಬೌದ್ಧಧರ್ಮ ಸ್ವೀಕಾರ ಅವರ ಮಾನವತೆಯ ಘೋಷಣೆ; ಶೋಷಿತರ ವಿಮೋಚನೆಗೆ ದಿಕ್ಕು ತೋರಿದ ಕ್ರಾಂತಿಕಾರಿ ಹೆಜ್ಜೆಯಾಗಿದೆ.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜಾತಿವಾದಿಗಳು, ಮನುವಾದಿಗಳು, ಪುರೋಹಿತಶಾಹಿಗಳು, ಅಂಬೇಡ್ಕರ್‌ರನ್ನು ನಿಂದಿಸಿದರೂ, ಜರಿದರೂ ತೆಲೆಯುತ್ತದಂತೆ ಅವಮಾನಗೊಳಿಸಿ ದೂರ ತಳ್ಳಿದರು, ಅವರು ಭಾರತೀಯರಿಗೆ ನ್ಯಾಯ-ಸ್ವಾತಂತ್ರ್ಯ-ಸಮಾನತೆ ಎಂಬ ಶಾಶ್ವತ ಮೌಲ್ಯಗಳನ್ನು ಒಳಗೊಂಡ ವಿಶ್ವದಲ್ಲಿಯೇ ಶ್ರೇಷ್ಠವಾದ ಸಂವಿಧಾನವನ್ನು ರಚಿಸಿದರು. ಆರ್ಥಿಕ ನೀತಿ, ಉದ್ಯಮೀಕರಣ, ಯೋಜಿತ ಅಭಿವೃದ್ಧಿ, ರಿಸರ್ವ್ ಬ್ಯಾಂಕ್‌ ಸ್ಥಾಪನೆಯ ಕಲ್ಪನೆ-ಇವೆಲ್ಲವೂ ಅವರ ಅಗಾಧ ಆರ್ಥಿಕ ಚಿಂತನೆಯ ಪ್ರತೀಕಗಳು ಪ್ರತಿಬಿಂಬಗಳಾಗಿವೆ.

ವಿಶ್ವದ ಚಿಂತಕರು ಅವರನ್ನು “ಆಧುನಿಕ ಬುದ್ಧ”, “ಸಾಮಾಜಿಕ ಕ್ರಾಂತಿಯ ಶಿಲ್ಪಿ”, “ಮಹಿಳಾ ವಿಮೋಚಕ”, “ಜಗತ್ತಿನ ಶ್ರೇಷ್ಠ ಪುಸ್ತಕಪ್ರೇಮಿ” ಎಂದು ಕೊಂಡಾಡುತ್ತಾರೆ. ಅವರ ಜ್ಞಾನಪ್ರಭೆಯ ಮುಂದೆ ಅನ್ಯಾಯದ ಅಂಧಕಾರ ಕಮರಿಬಿಡುತ್ತದೆ.

ಆದರೆ ಇಂದು ಈ ನಮ್ಮ ಭಾರತ ದೇಶದ ಮೂಲನಿವಾಸಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಜಾತಿ ದೌರ್ಜನ್ಯಗಳು ಸಹೃದಯಿ ಮನಸ್ಸನ್ನು ಕಲುಷಿತಗೊಳಿಸುತ್ತವೆ. ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯ ಸ್ವಾರ್ಥಕ್ಕೆ ಬಳಸುವುದಕ್ಕೆ ಬದಲು, ಅವರ ಶಿಕ್ಷಣ–ಸಂಘಟನೆ–ಹೋರಾಟದ ಮಾರ್ಗವನ್ನು ಅನುಸರಿಸುವುದು ನಾಡಿನ ಜನತೆಯ ಆದ್ಯ ಕರ್ತವ್ಯ.

ಅಂಬೇಡ್ಕರ್ ಪುಣ್ಯಸ್ಮರಣೆಗಾಗಿ ಮಾತ್ರವಲ್ಲ;
ಜಾತಿರಹಿತ, ಸಮಾನತೆಯ, ನವ–ಭಾರತ ನಿರ್ಮಾಣದ ದಾರಿಯನ್ನು ತೋರುವ ದಿವ್ಯ ಚೈತನ್ಯ ಚೈತನ್ಯದ ಆಲೋಚನೆಗಳನ್ನು ಮೆಲುಕು ಹಾಕಲು ಇದೊಂದು ಸುಸಮಯ.

Related Articles

Leave a Reply

Your email address will not be published. Required fields are marked *

Back to top button