ಲೇಖನ

ಬಿಹಾರದಲ್ಲಿ ಮಹಾಘಟಬಂಧನದ ಹೊಸ ಉಪಮುಖ್ಯಮಂತ್ರಿ ಅಭ್ಯರ್ಥಿ – ಮುಖೇಶ್ ಸಹಾನಿ ಯಾರು?

ಲೇಖನ: ಗಿರೀಶ ತುಂಬಗಿ.

ಬಿಹಾರದ ರಾಜಕೀಯದಲ್ಲಿ ಇದೀಗ ಹೊಸ ಮುಖದ ಹೆಸರು ಕೇಳಿಸುತ್ತಿದೆ — ಮುಖೇಶ್ ಸಹಾನಿ. ಶಾಸಕರೇ ಇಲ್ಲದ ಪಕ್ಷದ ನಾಯಕನಾದರೂ, ಮಹಾಘಟಬಂಧನವು ಅವರನ್ನು ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ.

ಮುಖೇಶ್ ಸಹಾನಿ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ)ಯ ಅಧ್ಯಕ್ಷರು. ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸುವಾಗಲೇ, ಸಹಾನಿಯವರ ಹೆಸರು ಉಪಮುಖ್ಯಮಂತ್ರಿಯಾಗಿ ಪ್ರಕಟಿಸಲಾಯಿತು.

ತಮ್ಮನ್ನು “ಮಲ್ಲಾಹನ ಮಗ” ಎಂದು ಕರೆಸಿಕೊಳ್ಳುವ ಸಹಾನಿ, ಮೀನುಗಾರ ಹಾಗೂ ಅಂಬಿಗ ಸಮುದಾಯದವರಾದ ನಿಶಾದ್ ಸಮುದಾಯದ ಮುಖಂಡರಾಗಿದ್ದಾರೆ. ಬಿಹಾರದಲ್ಲಿ ಅತ್ಯಂತ ಹಿಂದುಳಿದ ವರ್ಗಗಳ (EBC) ಮತದಾರರು ಸುಮಾರು 30% ಇದ್ದು, ನಿಶಾದ್ ಸಮುದಾಯದ ಮತಗಳು ರಾಜಕೀಯ ಸಮೀಕರಣದಲ್ಲಿ ನಿರ್ಣಾಯಕವಾಗಿವೆ.

ಸಹಾನಿಯವರ ಜನ್ಮ ದರ್ಭಂಗಾ ಜಿಲ್ಲೆಯ ಸುಪೌಲ್ ಬಝಾರ್‌ನಲ್ಲಿ. 44 ವರ್ಷದ ಅವರು ಎಂಟನೇ ತರಗತಿವರೆಗೂ ಮಾತ್ರ ಓದಿದ್ದು, 19ನೇ ವಯಸ್ಸಿನಲ್ಲಿ ಬಾಲಿವುಡ್ ಕನಸಿಗಾಗಿ ಮುಂಬೈಗೆ ತೆರಳಿದರು. ಅಲ್ಲಿ ಮುಖೇಶ್ ಸಿನಿ ವರ್ಲ್ಡ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಸ್ಥಾಪಿಸಿ, ದೇವದಾಸ್ (2002) ಮತ್ತು ಬಜರಂಗಿ ಭಾಯಿಜಾನ್ (2015) ಮುಂತಾದ ಯಶಸ್ವಿ ಚಿತ್ರಗಳಿಗೆ ಸೆಟ್ ವಿನ್ಯಾಸ ಮಾಡಿದರು.

ಚಿತ್ರರಂಗದಲ್ಲಿ ಯಶಸ್ಸು ಕಂಡ ಬಳಿಕ ತಮ್ಮ ಸಮುದಾಯದ ಅಭಿವೃದ್ಧಿಗೆ ತೊಡಗಿಕೊಂಡ ಅವರು, 2008ರಲ್ಲಿ ಆಯೋಜಿಸಿದ ಭವ್ಯ ಛತ್ ಪೂಜಾ ಮೂಲಕ ಜನಪ್ರಿಯತೆ ಪಡೆದರು. 2010ರಲ್ಲಿ ಸಹಾನಿ ಸಮಾಜ ಕಲ್ಯಾಣ ಸಂಸ್ಥೆ ಸ್ಥಾಪಿಸಿ ನಿಶಾದ್ ಸಮುದಾಯದ ಬೆಂಬಲವನ್ನು ಪಡೆದರು.

ರಾಜಕೀಯ ಪಯಣ 2015ರಲ್ಲಿ ಆರಂಭವಾಯಿತು. ಮೊದಲು ಬಿಜೆಪಿ ಪರ ಪ್ರಚಾರ ನಡೆಸಿದರೂ, ನಿಶಾದ್ ಸಮುದಾಯವನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸುವ ಬೇಡಿಕೆ ಈಡೇರದ ಕಾರಣ ಪಕ್ಷದಿಂದ ದೂರಾದರು. 2018ರಲ್ಲಿ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಸ್ಥಾಪಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಮಹಾಘಟಬಂಧನದ ಭಾಗವಾಗಿ ಸ್ಪರ್ಧಿಸಿ ಸೋತರೂ, 2020ರ ವಿಧಾನಸಭಾ ಚುನಾವಣೆಗೆ ಮುನ್ನ ಎನ್‌ಡಿಎ ಸೇರಿ ನಾಲ್ಕು ಸ್ಥಾನಗಳನ್ನು ಗೆದ್ದರು. ಆದರೆ ಬಳಿಕ ಅವರ ಶಾಸಕರು ಬಿಜೆಪಿ ಸೇರಿದರು. 2022ರಲ್ಲಿ ಸಹಾನಿ ಮತ್ತೆ ಮಹಾಘಟಬಂಧನಕ್ಕೆ ವಾಪಸ್ಸಾದರು.

2024ರ ಲೋಕಸಭಾ ಚುನಾವಣೆಯಲ್ಲಿ ವಿಐಪಿ ಸ್ಪರ್ಧಿಸಿದರೂ ಗೆಲುವು ಸಿಕ್ಕಿಲ್ಲ. ಪ್ರಸ್ತುತ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಸಹಾನಿ 30 ಸ್ಥಾನಗಳ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮಹಾಘಟಬಂಧನವು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ರಾಜಕೀಯ ಸಮತೋಲನ ಸಾಧಿಸಿದೆ.

ತೇಜಸ್ವಿ ಯಾದವ್ ಮತ್ತು ಚಿರಾಗ್ ಪಾಸ್ವಾನ್ ಅವರನ್ನು ನಿತೀಶ್ ಕುಮಾರ್ ಅವರ ಸಾಮಾಜಿಕ ನ್ಯಾಯ ಪರಂಪರೆಯ ನಿಜವಾದ ಉತ್ತರಾಧಿಕಾರಿಗಳೆಂದು ಸಹಾನಿ ಹೇಳಿದ್ದಾರೆ. ಅವರ ಘೋಷವಾಕ್ಯ — “ಎಲ್ಲಿ ನದಿ ಇದೆಯೋ, ಅಲ್ಲೆ ಮಲ್ಲಾ ಇರುತ್ತಾನೆ” — ನಿಶಾದ್ ಸಮುದಾಯದ ಬಲವನ್ನು ಪ್ರತಿಬಿಂಬಿಸುತ್ತದೆ.

ಬಾಲಿವುಡ್‌ನಿಂದ ಬಿಹಾರದ ರಾಜಕೀಯ ವೇದಿಕೆಯವರೆಗೆ ಪಯಣಿಸಿದ ಮುಖೇಶ್ ಸಹಾನಿ, ಈಗ ಉಪಮುಖ್ಯಮಂತ್ರಿಯಾಗಿ ರಾಜ್ಯದ ಹೊಸ ರಾಜಕೀಯ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button