ಸಮಾಜದವರು ಜಾಗೃತಿಯಿಂದ ಮಾಹಿತಿಯನ್ನು ದಾಖಲಿಸಬೇಕು : ದತ್ತಾತ್ರೆಯಾರೆಡ್ಡಿ
ಜಾತಿ ಕಾಲಂ ನಲ್ಲಿ ಕೋಲಿ, ಕಬ್ಬಲಿಗ ಜಾತಿಯನ್ನೆ ಬರೆಸುವಂತೆ ಮನವಿ..!

ಯಾದಗಿರಿ : ರಾಜ್ಯಾದ್ಯಂತ ಜಾತಿಜನಗಣತಿ ನಡೆಸಲು ರಾಜ್ಯ ಸರ್ಕಾರ ಮುಂದಾಗಿರುವ ನಿರ್ಧಾರವನ್ನು ಕೋಲಿ ಸಮಾಜದವರು ಸ್ವಾಗತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾದಗಿರಿಯ ಪತ್ರಿಕಾ ಭವನದಲ್ಲಿ ಕೋಲಿ ಸಮಾಜದ ರಾಜ್ಯಾಧ್ಯಕ್ಷ ದತ್ತಾತ್ರೆಯಾರೆಡ್ಡಿ ಪತ್ರಿಕಾಗೋಷ್ಠಿ ನಡೆಸಿದರು.
ಅವರು ಮಾತನಾಡುತ್ತಾ, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮಾಜದ ಪ್ರತಿಯೊಬ್ಬರೂ ಜಾಗೃತಿಯಿಂದ ಸರಿಯಾದ ಮಾಹಿತಿಯನ್ನು ದಾಖಲಿಸಬೇಕೆಂದು ಕರೆ ನೀಡಿದರು.
ಮನೆ ಮನೆಗೆ ಸಮೀಕ್ಷಾಧಿಕಾರಿಗಳು ಭೇಟಿ ನೀಡುವ ಸಂದರ್ಭದಲ್ಲಿ ಜಾತಿ ಕಾಲಂ (ಕಾಲಂ 9) ನಲ್ಲಿ ಪ್ರಾಂತ್ಯಾನುಸಾರ ಕೋಲಿ, ಕಬ್ಬಲಿಗ, ಬೆಸ್ತ ಎಂಬುದರಲ್ಲಿ ಒಂದೇ ಪದವನ್ನು ಬರೆಸಬೇಕೆಂದು ತಿಳಿಸಿದರು. ಉಪಜಾತಿ ಕಾಲಂ (ಕಾಲಂ 10) ಯಲ್ಲಿ ಶಾಲಾ ದಾಖಲೆಗಳಲ್ಲಿ ಇರುವಂತೆ ನಮೂದಿಸಬೇಕು. ಪರ್ಯಾಯ ಪದಗಳ ಕಾಲಂ (ಕಾಲಂ 11) ನಲ್ಲಿ ಟೋಕರೆ ಕೋಲಿ ಎಂದು ಬರೆಸಬೇಕೆಂದು ಸೂಚಿಸಿದರು.
ಸಮೀಕ್ಷೆಯ ಈ ಅಂಕಿ-ಅಂಶಗಳಿಂದ ಕೋಲಿ ಸಮಾಜದ ನೈಜ ಜನಸಂಖ್ಯೆಯ ವಿವರ ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ತಲುಪಲಿದೆ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ನೀಡಿದಂತೆ, ಅಂಕಿ-ಅಂಶಗಳ ಆಧಾರದ ಮೇಲೆ ಸಮಾಜಕ್ಕೆ ಸರ್ಕಾರದ ಯೋಜನೆಗಳಲ್ಲಿ ಹಾಗೂ ರಾಜಕೀಯ ಪ್ರತಿನಿಧಿತ್ವದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿವೆ. “ಸಂಖ್ಯೆ ಹೆಚ್ಚಾದಷ್ಟೂ ಪಾಲು ಹೆಚ್ಚುತ್ತದೆ” ಎಂದು ಅವರು ಒತ್ತಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜು ಗುರುಸ್ವಾಮಿ (ವೇದವ್ಯಾಸ ಗುರುಪೀಠ, ಕರ್ಕಹಳ್ಳಿ), ಡಾ. ಇಂದ್ರಾಶಕ್ತಿ (ಅಖಿಲ ಭಾರತೀಯ ಕೋಲಿ ಸಮಾಜ ಉಪಾಧ್ಯಕ್ಷರು), ಉಮೇಶ ಕೆ. ಮುದ್ನಾಳ (ರಾಜ್ಯ ಸಂಘಟನಾ ಕಾರ್ಯದರ್ಶಿ), ಡಾ. ಟಿ.ಡಿ. ರಾಜು (ರಾಜ್ಯ ಶಿಸ್ತು ಸಮಿತಿ), ದೇವೇಂದ್ರ ಚಿಗರಹಳ್ಳಿ (ರಾಜ್ಯ ಪ್ರಧಾನ ಕಾರ್ಯದರ್ಶಿ), ವಿಜಯಕುಮಾರ ಡಿ. (ಶಹಾಬಾದ್), ಅಂಬ್ರೇಶ ದೋರನಹಳ್ಳಿ, ಪವನ ಮುದ್ನಾಳ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.