ಜಿಲ್ಲಾಸುದ್ದಿ

ನಿರಾಶ್ರಿತರ ಕೇಂದ್ರದ 155 ನಿರ್ಗತಿಕರಿಗೆ ಉಚಿತ ಕ್ಷೌರ ಸೇವೆ

ಚಿತ್ತಾಪೂರ: ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ (ಸುಗೂರ ಎನ್) ಅವರು, ಸತತವಾಗಿ ಆರು ವರ್ಷಗಳಿಂದ ಪ್ರತಿವರ್ಷ ವಿಭಿನ್ನ ಕ್ಷೇತ್ರದ ನಿರ್ಗತಿಕರು, ಅನಾಥರು, ವೃದ್ಧರು, ಅಂಗವಿಕಲರು ಹಾಗೂ ಕಾರ್ಮಿಕರಿಗೆ ಉಚಿತ ಕ್ಷೌರ ಸೇವೆ ಸಲ್ಲಿಸುತ್ತಿದ್ದಾರೆ.

ಇದರ ಅಂಗವಾಗಿ, ಪರಮ ಪೂಜ್ಯ ಶ್ರೀ ಷ.ಬ್ರ.ಡಾ. ಸಿದ್ದ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 61ನೇ ಜನ್ಮದಿನದ ಪ್ರಯುಕ್ತ, ಕಲಬುರಗಿ ಬಿದ್ದಾಪೂರ ಕಾಲೋನಿಯ ನಿರಾಶ್ರಿತರ ಕೇಂದ್ರದಲ್ಲಿ 155 ನಿರ್ಗತಿಕರಿಗೆ ಉಚಿತ ಕ್ಷೌರ ಸೇವೆ ಸಲ್ಲಿಸಲಾಯಿತು. ಇಂದುವರೆಗೆ ಅವರು ಒಟ್ಟು 15 ಕಡೆಗಳಲ್ಲಿ 1650 ಕ್ಕೂ ಹೆಚ್ಚು ಜನರಿಗೆ ಸೇವೆ ನೀಡಿದ್ದಾರೆ.

ಮಲ್ಲಿಕಾರ್ಜುನ ಹಡಪದ ಅವರು “ಬಡವರು, ನಿರ್ಗತಿಕರು, ರೋಗಿಗಳು, ಅನಾಥರು, ವೃದ್ಧರಲ್ಲಿಯೇ ದೇವರನ್ನು ಕಂಡು ಸೇವೆ ಸಲ್ಲಿಸುವುದೇ ನನ್ನ ಜೀವನದ ಸಾರ್ಥಕತೆ” ಎಂದು ಹೇಳಿದರು. ಸಮಾಜಸೇವೆಗೆ ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 35 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಅವರು ಗಳಿಸಿದ್ದಾರೆ.

ಈ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಾಲಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳು “ಹಿರಿಯರನ್ನು ಗೌರವಿಸುವುದು ಇಂದಿನ ಸಮಾಜದಲ್ಲಿ ಕಡಿಮೆಯಾಗುತ್ತಿದೆ. ಯುವಕರು ಅಜ್ಜ-ಅಜ್ಜಿಯರ ಸೇವೆಗೆ ಮುಂದಾದರೆ ನಿರಾಶ್ರಿತರ ಕೇಂದ್ರಗಳ ಅವಶ್ಯಕತೆ ಕಡಿಮೆಯಾಗುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು ಬಸವರಾಜ ಹಡಪದ, ಬಸವರಾಜ ಹಳ್ಳಿ, ರಮೇಶ್ ಹಡಪದ ನೀಲೂರ, ರುದ್ರಮಣಿ ಬಟಗೇರಾ, ಪ್ರಕಾಶ ಪವ್ಹಾರ, ವಿರೇಶ ಸರ, ನಾಗಣ್ಣಾ ಮುತ್ತಕೋಡ್, ಶಂಭುಲಿಂಗ ನಗರ ಘಟಕ, ಚಂದ್ರಶೇಖರ ತೊನಸನಹಳ್ಳಿ, ವಿನೋದ ಅಂಬಲಗಾ, ಮಲ್ಲಿಕಾರ್ಜುನ ಬೆಳಗುಪ್ಪಾ, ಅರುಣ ಗೊಬ್ಬೂರ, ಮಹಾದೇವ ವಡಗೇರಿ, ಮಲ್ಲಿಕಾರ್ಜುನ ಮದರಗಾಂವ್, ರಮೇಶ್ ಕರಾರಿ, ಅಂಕುಶ ಶಿರಡೂಣ ಮೊದಲಾದವರು ಭಾಗವಹಿಸಿ ಸೇವೆ ಸಲ್ಲಿಸಿದರು. ಮಲ್ಲಿಕಾರ್ಜುನ ಬಿ. ಹಡಪದ ಅವರು ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button