ಮುತ್ತಗಾದಲ್ಲಿ ಅಂಬಿಗರ ಚೌಡಯ್ಯ ಪ್ರತಿಮೆ ವಿರೂಪ : ಕಠಿಣ ಕ್ರಮಕ್ಕೆ ಸೂಚನೆ

ಚಿತ್ತಾಪುರ: ಚಿತ್ತಾಪುರ ಮತಕ್ಷೇತ್ರದ ಮುತ್ತಗಾ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆಗೆ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
“ಈ ಕೃತ್ಯ ಹೇಯ ಹಾಗೂ ಖಂಡನೀಯ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಲಿದೆ” ಎಂದು ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಘಟನೆಯ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ, ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ವಚನ ಕ್ರಾಂತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಿದ ಬಸವಣ್ಣನವರ ಅನುಯಾಯಿ ಶರಣ ಎಂದು ಅವರು ನೆನಪಿಸಿಕೊಂಡರು. “ಅವರ ವಚನಗಳು ವಿಚಾರವಂತಿಕೆ ಮೂಡಿಸುತ್ತವೆ. ಇಂತಹ ಮಹಾನ್ ವಚನಕಾರರ ಪ್ರತಿಮೆಯನ್ನು ವಿರೂಪಗೊಳಿಸಿರುವುದು ನಮ್ಮ ಭವ್ಯ ಪರಂಪರೆಗೆ ಅವಮಾನ. ಇದನ್ನು ಸರ್ಕಾರ ಯಾವತ್ತೂ ಸಹಿಸುವುದಿಲ್ಲ” ಎಂದು ಪ್ರಿಯಾಂಕ್ ಖರ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ.