ಕಲಬುರಗಿಜಿಲ್ಲೆ ಸುದ್ದಿ

ಚಂದು ಪಾಟೀಲಗೆ ವೈಯಕ್ತಿಕ ನಿಂದನೆ ಸರಿಯಲ್ಲ: ಕಲ್ಲೂರ್

ಕಲಬುರಗಿ, ಆ.22: ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ವಿಫಲವಾಗಿದ್ದು, ಹದಗೆಟ್ಟ ರಸ್ತೆಗಳು, ರಸ್ತೆ ಗುಂಡಿಗಳು, ಜಿಲ್ಲಾ ಆಡಳಿತದ ಕಾರ್ಯವೈಖರಿ ಹಾಗೂ ಸೂಪರ್ ಮಾರ್ಕೆಟ್‌ನಲ್ಲಿ ಜನ ಸಂಚರಿಸಲಾಗದಂತಹ ವಾತಾವರಣ ನಿರ್ಮಾಣವಾಗಿರುವುದನ್ನು ಖಂಡಿಸಿ ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಚಂದು ಪಾಟೀಲ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆಯಲ್ಲಿ, ಆಡಳಿತ ಪಕ್ಷದ ಪ್ರತಿನಿಧಿಗಳಿಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್ ನಾಯಕರು ವೈಯಕ್ತಿಕ ನಿಂದನೆ ಮಾಡುತ್ತಿರುವುದು ಎಷ್ಟು ಸರಿ ಎಂದು ಬಿಜೆಪಿ ನಗರ ಒಬಿಸಿ ಘಟಕದ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ್ ಪ್ರಶ್ನಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಸಾರ್ವಜನಿಕರ ಸಮಸ್ಯೆಗಳ ಕುರಿತು ಪ್ರಶ್ನೆ ಕೇಳಬೇಕೇ ಹೊರತು, ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಿರುವ ವಿರೋಧ ಪಕ್ಷದವರನ್ನು ಪ್ರಶ್ನಿಸಬಾರದು ಎಂದರೆ ಅಧಿಕಾರ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಿ ಎಂಬಂತೆ ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೊಲೆ, ಸುಲಿಗೆ, ಸರಗಳ್ಳತನ, ಅಕ್ರಮ ಗಾಂಜಾ ಮಾರಾಟ, ಮಟ್ಕಾ ದಂಧೆ, ಅಕ್ರಮ ಮರಳು ಸಾಗಾಟ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದವರು ಯಾರು ಎಂಬುದನ್ನು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾಮಗಾರಿಗಳ ಬದಲಾಗಿ ಜನರಿಂದ ಹಣ ಲೂಟಿ, ಸರ್ಕಾರದ ವೈಫಲ್ಯ, ಸಚಿವರ ಕಾರ್ಯಕ್ಷಮತೆ, ಉದ್ಯೋಗ, ಕುಡಿಯುವ ನೀರಿನ ಸೌಲಭ್ಯ, ರಸ್ತೆ ಸುರಕ್ಷತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ವಿರೋಧ ಪಕ್ಷದ ನಾಯಕರು ಪ್ರಶ್ನಿಸಿದಾಗ, ಅವರಿಗೆ ವೈಯಕ್ತಿಕ ನಿಂದನೆ ಮಾಡಿ ಪ್ರಕರಣ ದಾಖಲಿಸಿ ಹೆದರಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸುವುದು ವಿರೋಧ ಪಕ್ಷದ ಜವಾಬ್ದಾರಿಯಾಗಿದೆ. ಜನರ ಸಮಸ್ಯೆಗಳಿಗೆ ಉತ್ತರ ನೀಡುವ ಬದಲು ವೈಯಕ್ತಿಕ ನಿಂದನೆ ಹಾಗೂ ಪ್ರಕರಣಗಳ ಮೂಲಕ ಧ್ವನಿ ಅಡಗಿಸುವ ಪ್ರಯತ್ನ ಸರಿಯಲ್ಲ ಎಂದು ದೇವೇಂದ್ರ ದೇಸಾಯಿ ಕಲ್ಲೂರ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button