ನ.೧ರಂದು ಕನ್ನಡ ರಾಜ್ಯೋತ್ಸವ: ಪೂರ್ವಭಾವಿ ಸಭೆ

ಚಿತ್ತಾಪುರ: ತಾಲೂಕು ಆಡಳಿತದಿಂದ ನವೆಂಬರ್ ೧ರಂದು ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವ ಸಂಭ್ರಮ ಸಡಗರದಿಂದ ನಡೆಯಲು ಎಲ್ಲರೂ ಸಹಕರಿಸಬೇಕು ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದರು.
ಪಟ್ಟಣದ ಪ್ರಜಾಸೌಧ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸೋಣ. ಸರಿಯಾದ ಸಮಯಕ್ಕೆ ಧ್ವಜಾರೋಹಣ ಹಾಗೂ ಇನ್ನಿತರ ಚಟುವಟಿಕೆಗಳನ್ನು ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳೊಣ. ಕನ್ನಡ ನಾಡು ಮತ್ತು ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡೋಣ ಎಂದರು.
ಕನ್ನಡಪರ ಸಂಘಟನೆ ಮುಖಂಡರು ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಜೊತೆಗೆ ವಿಭಿನ್ನ ಕಾರ್ಯಕ್ರಮ ಮಾಡಲು ಉದ್ದೇಶಿಸಬೇಕು. ಪ್ರಜಾಸೌಧ ಬಹುಮಹಡಿ ಕಟ್ಟಡದಿಂದ ಪ್ರಾರಂಭವಾದ ಮೆರವಣಿಗೆ ಅಂಬಿಗರ ಚೌಡಯ್ಯ ವೃತ್ತ, ರೈಲ್ವೆ ನಿಲ್ದಾಣದ ಮೂಲಕ ನಾಗಾವಿ ವೃತ್ತ, ಜನಾತ ಚೌಕ್, ಭುವನೇಶ್ವರಿ ಚೌಕ್ ನಲ್ಲಿ ಸೇರಿ ನಾಡಗೀತೆ ಹಾಡಲಾಗುತ್ತದೆ. ಬಳಿಕ ಅಂಬೇಡ್ಕರ್ ವೃತ್ತ ಹಾಗೂ ಬಸವೇಶ್ವರ ವೃತ್ತದ ಮೂಲಕ ಸಾಗಿ ಪ್ರಜಾಸೌಧಕ್ಕೆ ತಲುಪುತ್ತದೆ. ಮದ್ಯಾಹ್ನ ೧೨ಗಂಟೆಗೆ ಪ್ರಜಾಸೌಧ ಬಹುಮಹಡಿ ಕಟ್ಟಡದ ಮುಂಭಾಗದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳಿಂದ ಹಾಗೂ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರುಗಲಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕಾಶೀನಾಥ್ ಗುತ್ತೇದಾರ ಮಾತನಾಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು. ನಮ್ಮ ನಾಡಿನ ಹಿರಿಯ ಸಾಹಿತ್ಯಗಳ ಭಾವಚಿತ್ರ ಮೆರವಣಿಗೆ ನಡೆಸಲು ತೀರ್ಮಾನಿಸಿದರೆ ಅರ್ಥ ಬರುತ್ತದೆ. ನಮ್ಮ ತಾಲೂಕಿನಲ್ಲಿರುವ ಕನ್ನಡಪರ ಹೋರಾಟಗಾರಿಕೆ ಹಾಗೂ ಸಾಹಿತಿಗಳಿಗೆ ಸನ್ಮಾನಿಸುವ ಮೂಲಕ ಗೌರವಿಸೋಣ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣದ) ಅಧ್ಯಕ್ಷ ಚಂದರ ಚವ್ಹಾಣ ಮಾತನಾಡಿ, ಬ್ಯಾಂಕ್ ಕಚೇರಿಗಳಲ್ಲಿ ಹಾಗೂ ಅಂಗಡಿಗಳ ಮುಂಟಗಟ್ಟುಗಳ ನಾಮಫಲಕಲ್ಲಿ ಕಡ್ಡಾಯವಾಗಿ ಕನ್ನಡದಿಂದ ಕೂಡಿರಬೇಕು ಎಂದು ಹಲವು ಬಾರಿ ಹೋರಾಟ ನಡೆಸಿದ್ದೇವೆ. ಆದರೂ, ಅದು ಜಾರಿಗೆ ಬರುತ್ತಿಲ್ಲ. ತಾಲೂಕು ಆಡಳಿತ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಬೇಕು. ಬರೀ ಇಂಗ್ಲಿಷ್ ಫಲಕಗಳನ್ನು ಹಾಕಿದರೆ ನಾವುಗಳು ಸಹಿಸುವುದಿಲ್ಲ ಎಂದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಠಕಲ್ ಮಾತನಾಡಿದರು. ಗ್ರೇಡ್ (೨) ತಹಶೀಲ್ದಾರ ರಾಜಕುಮಾರ್ ಮರತೂರಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಅಕ್ರಂ ಪಾಶಾ, ಪುರಸಭೆ ಮುಖ್ಯಾಧಿಕಾರಿ ಮನೋಜ್ ಕುಮಾರ್ ಗುರಿಕಾರ್, ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣಶೇಟ್ಟಿ ಬಣದ) ಅಧ್ಯಕ್ಷ ನರಹರಿ ಕುಲಕುರ್ಣಿ, ಅಗ್ನಿಶಾಮಕ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿರುವ ತಾಲೂಕಿನ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸತ್ಕರಿಸುವ ಕುರಿತು ಚರ್ಚೆ ನಡೆಯಿತು.


