ಅಸಮಾನತೆ ವಿರುದ್ಧ ಧ್ವನಿ ಎತ್ತಿದ ಶರಣ ಕನಕದಾಸ
ಧರ್ಮ ದೇವಾಲಯದ ಗಂಟೆಯಲ್ಲ, ಸತ್ಯಸಂಧ ಹೃದಯದಲ್ಲಿದೆ’- ಕನಕದಾಸರ ಅಮರ ಸಂದೇಶ

ಲೇಖನ: ಡಾ. ಪದ್ಮರಾಜ ರಾಸಣಗಿ,ರಾಜ್ಯಶಾಸ್ತ್ರ ಉಪನ್ಯಾಸಕರು.
ಕರ್ನಾಟಕದ ಇತಿಹಾಸದಲ್ಲಿ ಹನ್ನೆರಡನೆಯಿಂದ ಹದಿನಾರನೆಯ ಶತಮಾನಗಳ ನಡುವೆ ಅಶಾಂತಿ, ಆರಾಜಕತೆ, ಅವ್ಯವಸ್ಥೆ ಹಾಗೂ ಅಸಮಾನತೆಗಳು ಸಮಾಜದಲ್ಲಿ ವ್ಯಾಪಕವಾಗಿದ್ದವು. ಧರ್ಮ ಮತ್ತು ಸಮಾಜದಲ್ಲಿದ್ದ ಕಳೆ ಹಾಗೂ ಕೊಳೆಯನ್ನು ನಿವಾರಿಸಲು ಶರಣರು ಮತ್ತು ಹರಿದಾಸರು ಸಾಮಾಜಿಕ, ಧಾರ್ಮಿಕ ಪರಿವರ್ತನೆಯ ಹಾದಿಯಲ್ಲಿ ನಡೆದುಕೊಂಡರು. ಈ ಪರಿವರ್ತನೆ ಯಾತ್ರೆಯಲ್ಲಿ ಕನಕದಾಸರು ಅತ್ಯಂತ ಪ್ರಮುಖ ಪಾತ್ರವಹಿಸಿದರು.
ಅವರು ಧಾರ್ಮಿಕ ಕ್ಷೇತ್ರದಲ್ಲಿ ಆಳವಾಗಿ ಬೇರೊರಿದ್ದ ಅಸಮಾನತೆ, ಅಜ್ಞಾನ, ಮೂಢನಂಬಿಕೆ ಹಾಗೂ ಪ್ರಾಣಿ ಬಲಿಯಂತಹ ಅರ್ಥವಿಲ್ಲದ ಸಂಪ್ರದಾಯಗಳನ್ನು ತೊಡೆದುಹಾಕಿ, ಧರ್ಮದ ನಿಜವಾದ ಅರ್ಥ ಮತ್ತು ತಿರುಳನ್ನು ಜನಸಾಮಾನ್ಯರಿಗೆ ತಿಳಿಸಲು ನಿತ್ಯ ಶ್ರಮಿಸಿದರು. ಇದರಿಂದಾಗಿ ಕನಕದಾಸರು ದಮನಿತರ ಹಾಗೂ ಬಡವರ ಪಾಲಿನ ದ್ರುವತಾರೆಯಾದರು.
ಜನನ ಮತ್ತು ಬಾಲ್ಯ
ಕನಕದಾಸರು 1488ರ ನವೆಂಬರ್ 5ರಂದು ಆಗಿನ ದಾರವಾಡ ಜಿಲ್ಲೆಯ ಬಾಡ ಗ್ರಾಮದಲ್ಲಿ (ಈಗ ಹಾವೇರಿ ಜಿಲ್ಲೆ) ಜನಿಸಿದರು. ತಂದೆ ಬೀರಪ್ಪಗೌಡ ಹಾಗೂ ತಾಯಿ ಬಚ್ಚಮ್ಮ. ಬೀರಪ್ಪಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತನಾಗಿ ಬಾಡ–ಬಂಕಾಪುರ ಪ್ರದೇಶದ ಆಡಳಿತ ನೋಡುತ್ತಿದ್ದರು.
ತಿರುಮಲೇಶ್ವರನ ವರದಿಂದ ಜನಿಸಿದ ಈ ಪುತ್ರನಿಗೆ “ತಿಮ್ಮಪ್ಪ” ಎಂದು ನಾಮಕರಣ ಮಾಡಲಾಯಿತು. ಆದರೆ ಬಾಲ್ಯದಲ್ಲೇ ತಾಯಿಯನ್ನೂ, ಐದು ವರ್ಷಗಳಲ್ಲಿ ತಂದೆಯನ್ನೂ ಕಳೆದುಕೊಂಡರು.
ಬಾಲಕ ತಿಮ್ಮಪ್ಪನು ಬಂಕಾಪುರದ ಶ್ರೀನಿವಾಸಾಚಾರ್ಯ, ತಿರುಪತಿಯ ತಾತಾಚಾರ್ಯ ಮತ್ತು ವಿಜಯನಗರದ ವ್ಯಾಸರಾಯರಿಂದ ವಿದ್ಯಾಭ್ಯಾಸ ಪಡೆದನು. ಕೇವಲ ಆರು ವಯಸ್ಸಿನಲ್ಲಿ ಸಂಸ್ಕೃತ ವ್ಯಾಕರಣ ಕಂಠಪಾಠ ಮಾಡಿದ ಬುದ್ಧಿವಂತನಾಗಿದ್ದನು. ಮಲ್ಲಯುದ್ಧ, ಕುಸ್ತಿ, ಜಲವಿದ್ಯೆ, ಕುದುರೆ ಸವಾರಿ ಮುಂತಾದ ಕೌಶಲ್ಯಗಳಲ್ಲಿ ಪರಿಣಿತನಾಗಿದ್ದ ತಿಮ್ಮಪ್ಪ ನಂತರ ಬಾಡ–ಬಂಕಾಪುರ ಪ್ರಾಂತ್ಯದ ಡಣಾಯಕನಾದನು.
ತಿಮ್ಮಪ್ಪನಾಯಕರಿಂದ ಕನಕದಾಸನಿಗೆ ರೂಪಾಂತರ
ಧರ್ಮಕಾರ್ಯಗಳಲ್ಲಿ ಆಸಕ್ತಿ ಬೆಳೆಸಿಕೊಂಡ ತಿಮ್ಮಪ್ಪನಾಯಕರಿಗೆ “ಕನಕದಾಸ” ಎಂಬ ಹೆಸರಿನ ಅರ್ಥ ಬಂದದ್ದು, ಅವರ ಧನಸಂಪತ್ತನ್ನು ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗೆ ಮುಡಿಪಾಗಿಟ್ಟ ಕಾರಣದಿಂದ.
ಯುದ್ಧದಲ್ಲಿ ಗಾಯಗೊಂಡು ವಿಶ್ರಾಂತಿಯಾಗಿದ್ದ ಸಂದರ್ಭದಲ್ಲಿ ಭಗವಂತನ ಪ್ರೇರಣೆಯಿಂದ ಅವರು ದಾಸರಾಗಬೇಕೆಂದು ನಿರ್ಧರಿಸಿದರು. ದೈವಪ್ರೇರಣೆಯೇ ಅವರನ್ನು ಕನಕದಾಸರನ್ನಾಗಿ ರೂಪಿಸಿತು.
ಭಕ್ತಿ, ತತ್ತ್ವ ಮತ್ತು ಸಾಹಿತ್ಯ
ಕನಕದಾಸರು ಮೋಕ್ಷವನ್ನು ತಮ್ಮ ಪಾಲಿಗೆ ಮಾತ್ರ ಸೀಮಿತಗೊಳಿಸದೆ, ಜನಸಾಮಾನ್ಯರಿಗೂ ಆ ಮಾರ್ಗವನ್ನು ತೋರಿಸಿದರು. ಆದ್ದರಿಂದ ಅವರನ್ನು ವಿಶ್ವಮಾನವ ಧರ್ಮದ ಪ್ರತಿನಿಧಿಗಳೆಂದು ಕರೆಯಬಹುದು. ಕನ್ನಡ ಮತ್ತು ಸಂಸ್ಕೃತದ ಪಂಡಿತರಾಗಿದ್ದ ಅವರು ನೂರಾರು ಕೀರ್ತನೆಗಳನ್ನೂ, ಮಹಾಕಾವ್ಯಗಳನ್ನೂ ರಚಿಸಿದರು.
ಹರಿದಾಸ ಪರಂಪರೆಯಲ್ಲಿ ಮಹಾಕಾವ್ಯ ರಚಿಸಿದ ಏಕೈಕ ಹರಿದಾಸ ಕನಕದಾಸರು. ಅವರ ಪ್ರಮುಖ ಕೃತಿಗಳು —
- ನಳಚರಿತೆ
- ಹರಿಭಕ್ತಿಸಾರ
- ರಾಮಧ್ಯಾನಚರಿತೆ
- ಮೋಹನತರಂಗಿಣಿ
- ಮಂಡಿಗೆಗಳು
ಈ ಕೃತಿಗಳಲ್ಲಿ ಕಾವ್ಯ, ಧರ್ಮ, ಹಾಗೂ ಸಮಾಜದ ವೈಶಿಷ್ಟ್ಯತೆಗಳು ಸ್ಪಷ್ಟವಾಗಿ ವ್ಯಕ್ತವಾಗುತ್ತವೆ.
ಕನ್ನಡ ಸೇವೆ ಮತ್ತು ಸಾಮಾಜಿಕ ಸಂದೇಶ
ಮಠಗಳಲ್ಲಿ ಸಂಸ್ಕೃತ ಹಾಗೂ ಜಾತಿಗೆ ಮಾತ್ರ ಪ್ರಾಮುಖ್ಯತೆ ನೀಡುತ್ತಿದ್ದ ಕಾಲದಲ್ಲಿ ಕನ್ನಡಕ್ಕೆ ಮಠಗಳಲ್ಲಿ ಮಾನ್ಯತೆ ದೊರೆಯುವಂತೆ ಮಾಡಿದವರು ಕನಕದಾಸರು. ಕನ್ನಡ ಭಾಷೆಯನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಕಾರ್ಯ ಅವರು ಕೈಗೊಂಡರು.
ಅವರು “ಖಡ್ಗವನ್ನು ಝಳಪಿಸಲು ಬಲ್ಲವರಾಗಿದ್ದಂತೆ ಲೇಖನಿಯನ್ನೂ ಪ್ರಭಾವಿಯಾಗಿ ಬಳಸಬಲ್ಲವರು” ಎಂದು ಹೇಳಬಹುದು.
“ಧರ್ಮ ಎಲ್ಲಿದೆ?” ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಸಾರ್ಥಕ –
“ಧರ್ಮ ದೇವಾಲಯದ ಗಂಟೆಯಲ್ಲಿಲ್ಲ, ಮಂತ್ರ ಪಠಿಸುವವರಲ್ಲಿಲ್ಲ, ಸತ್ಯಸಂಧ ಹೃದಯದಲ್ಲಿದೆ.”
ಸಾ.ಶಿ. ಮುರಳಯ್ಯ ಅವರ ಅಭಿಪ್ರಾಯದಲ್ಲಿ –
“ಜಾತಿಯಿಂದ ಕುರುಬನಾದರೂ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮತ್ತು ಪೇರಿಯಾರರ ಸಾಲಿನಲ್ಲಿ ನಿಲ್ಲಬಹುದಾದ ಧೀಮಂತ ವ್ಯಕ್ತಿತ್ವ.”
ಕನಕದಾಸರ ಜೀವನದ ಪಾದಚಿಹ್ನೆಗಳು
ಕಮ್ಮೂರು (ತಾಯಿಯ ತವರು), ಬಾಡ (ಜನ್ಮಸ್ಥಳ), ಕಾಗಿನೆಲೆ (ಆರಾಧ್ಯ ಆದಿಕೇಶವನ ಊರು), ವಿಜಯನಗರ (ಪ್ರತಿಭೆ ಅನಾವರಣಗೊಂಡ ರಾಜಧಾನಿ), ತಿರುಪತಿ (ಕುಲದೈವ ವೆಂಕಟೇಶ್ವರ), ಉಡುಪಿ (ಶ್ರೀಕೃಷ್ಣನ ದರ್ಶನದಿಂದ ಪ್ರಸಿದ್ಧಿ) — ಈ ಸ್ಥಳಗಳು ಅವರ ಜೀವನದ ಅವಿಭಾಜ್ಯ ಭಾಗಗಳಾಗಿವೆ.
ಕನಕದಾಸರ ಕೀರ್ತನೆಗಳ ಸಾಮಾಜಿಕ ಸಂದೇಶ
ಅವರು ಹಾಡುಗಳ ಮೂಲಕ ಸಮಾಜದ ಕಳಕಳಿಯನ್ನು ಎತ್ತಿ ಹಿಡಿದರು:
“ತಲ್ಲಣಿಸದಿರು ಕಂಡ್ಯ ತಾಳು ಮನವೆ,
ಎಲ್ಲಾರೂ ಮಾಡುವುದು ಹೊಟ್ಟೆಗಾಗಿ,
ವೇದ ಶಾಸ್ತ್ರ ಪಂಚಾಂಗ ಓದಿಕೊಂಡು ಬೋಧಿಸುವುದು ಹೊಟ್ಟೆಗಾಗಿ.”
ಇಂತಹ ನುಡಿಗಳು ಮಾನವ ಬದುಕಿನ ನೈಜತೆಯನ್ನು ತೋರಿಸುತ್ತವೆ.

