ವಿದ್ಯಾರ್ಥಿನಿಲಯಗಳಿಗೆ ಸಾಮಗ್ರಿ ಸರಬರಾಜಿನಲ್ಲಿ ಅವ್ಯವಹಾರ:ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಕಲಬುರಗಿಯ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯ ಟೆಂಡರ್ನಲ್ಲಿ ಷರತ್ತು ಉಲ್ಲಂಘನೆ – ಡಿ.ಡಿ. ಸೋಮಶೇಖರ್ ವಿರುದ್ಧ ಕಾನೂನು ಕ್ರಮದ ಬೇಡಿಕೆ

“ವಿದ್ಯಾರ್ಥಿಗಳ ಅನ್ನಕ್ಕೆ ಕನ್ನ ಹಾಕಿದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಆಗಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ.”– ಶ್ರವಣಕುಮಾರ ಡಿ. ನಾಯಕ.
ಕಲಬುರಗಿ: ಜಿಲ್ಲೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಆಹಾರ ಮತ್ತು ಇತರೆ ಅಗತ್ಯ ಸಾಮಗ್ರಿಗಳನ್ನು ಸರಬರಾಜು ಮಾಡುವ ಟೆಂಡರ್ನಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ಮತ್ತು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರವಣಕುಮಾರ ಡಿ. ನಾಯಕ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸರ್ಕಾರದ ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿ ಗುತ್ತಿಗೆದಾರರು ಆಹಾರ ಸರಬರಾಜು ಮಾಡದಿದ್ದರೂ, ಪ್ರತಿ ತಿಂಗಳು ಬೋಗಸ್ ಬಿಲ್ಗಳನ್ನು ಮಾಡಿಸಿಕೊಂಡು ಸರಕಾರಕ್ಕೆ ಭಾರಿ ನಷ್ಟ ಉಂಟುಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಅವರು ಮಾಡಿದ್ದಾರೆ. ಇದರಲ್ಲಿಯೇ ಕಲಬುರಗಿ ಜಿಲ್ಲೆಯ ಹಿಂದುಳಿದ ವರ್ಗಗಳ ಉಪ ನಿರ್ದೇಶಕ ಡಿ.ಡಿ. ಸೋಮಶೇಖರ್ ಅವರು ಅಧಿಕಾರದ ದುರುಪಯೋಗ ಮಾಡಿಕೊಂಡು ಗುತ್ತಿಗೆದಾರರ ಜೊತೆ ಒಳಸಂಚು ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಹಿಂದಿನ ಅಧಿಕಾರಿಗಳು ಈಗಾಗಲೇ ಈ ಟೆಂಡರ್ ಅಕ್ರಮಗಳ ಕುರಿತು ವರದಿ ಸಲ್ಲಿಸಿ ಕ್ರಮಕ್ಕೆ ಸೂಚನೆ ನೀಡಿದ್ದರು. ಆದರೆ ಪ್ರಸ್ತುತ ಉಪ ನಿರ್ದೇಶಕರು ಕ್ರಮ ಕೈಗೊಳ್ಳದೆ ಬಾಕಿ ಪಾವತಿಗಳನ್ನು ಮುಂದುವರಿಸುತ್ತಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ನಾಯಕರು ತಿಳಿಸಿದ್ದಾರೆ.
“ಆಹಾರ ಸರಬರಾಜಿನಲ್ಲಿ ಅಕ್ರಮ ನಡೆದಿರುವುದು ದಾಖಲೆಗಳಲ್ಲೇ ಸ್ಪಷ್ಟವಾಗಿದೆ. ಅಧಿಕಾರಿಗಳೂ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳಬೇಕು.”– ಎಂ.ಎಸ್. ಪಾಟೀಲ ನರಿಬೋಳ.
“ಸರ್ಕಾರದ ಆದೇಶ, ಟೆಂಡರ್ ನಿಯಮ ಹಾಗೂ ವಿದ್ಯಾರ್ಥಿಗಳ ಹಕ್ಕುಗಳನ್ನು ನಿರ್ಲಕ್ಷಿಸಿ ನಡೆದಿರುವ ಈ ಭ್ರಷ್ಟಾಚಾರದಲ್ಲಿ ಭಾಗಿಯಾದ ಡಿ.ಡಿ. ಸೋಮಶೇಖರ್ ಅವರನ್ನು ಕೂಡಲೇ ಅಮಾನತ್ತು ಮಾಡಬೇಕು. ಗುತ್ತಿಗೆದಾರರ ಪರವಾನಿಗೆಯನ್ನು ರದ್ದುಪಡಿಸಿ ಲೋಕಾಯುಕ್ತ ತನಿಖೆ ನಡೆಸಬೇಕು,” ಎಂದು ಆಗ್ರಹಿಸಿದರು.
ಅಲ್ಲದೆ, ಮುಂದಿನ ಬಿಲ್ಗಳನ್ನು ತಡೆಹಿಡಿದು, ಆಹಾರ ಸರಬರಾಜಿನ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಈ ವಿಷಯವನ್ನು ನಿರ್ಲಕ್ಷಿಸಿದರೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಂಧೀಪ ಭರಣಿ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ವಿಶ್ವರಾಧ್ಯ ಬಡಿಗೇರ ಉಪಸ್ಥಿತರಿದ್ದರು.



