ಕಲಬುರಗಿ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ₹3165 ನಿಗದಿ – ರೈತರಿಗೆ ಸ್ವಲ್ಪ ಸಮಾಧಾನ!
ಕೆ.ಪಿ.ಆರ್. ಕಾರ್ಖಾನೆ ಸರ್ಕಾರದ ಸೂಚನೆ ಪಾಲನೆಗೆ ಸಮ್ಮತಿ

ಕಲಬುರಗಿ :ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮೇಲೆ ನಡೆದ ಸರ್ಕಾರದ ಒತ್ತಡ ಮತ್ತು ರೈತ ಸಂಘಗಳ ಹೋರಾಟದ ಬಳಿಕ ಕೊನೆಗೂ ರೈತರಿಗೆ ಸ್ವಲ್ಪ ಮಟ್ಟಿನ ಸಮಾಧಾನ ದೊರೆತಿದೆ.
ಜಿಲ್ಲಾಡಳಿತದ ಮೇಲ್ವಿಚಾರಣೆಯಲ್ಲಿ ನಡೆದ ಚರ್ಚೆಯ ನಂತರ ಕೆ.ಪಿ.ಆರ್. ಸಕ್ಕರೆ ಕಾರ್ಖಾನೆ ಸರ್ಕಾರದ ಆದೇಶದಂತೆ ಕಬ್ಬಿನ ಕಟಾವು ಮತ್ತು ಸಾಗಾಣಿಕೆ ಹೊರತುಪಡಿಸಿ ಪ್ರತಿ ಟನ್ಗೆ ₹3165/- ನೀಡಲು ಒಪ್ಪಿಕೊಂಡಿದೆ ಎಂದು ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಅಧಿಕೃತವಾಗಿ ತಿಳಿಸಿದ್ದಾರೆ.
ಈ ನಿರ್ಧಾರಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದು, ಉಳಿದ ಕಾರ್ಖಾನೆಗಳೂ ಇದೇ ದರವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.
“ಕಬ್ಬಿನ ತೂಕ ಮತ್ತು ಇಳುವರಿಯಲ್ಲಿ ಪಾರದರ್ಶಕತೆ ಕಾಪಾಡಬೇಕು. ಪ್ರತಿ 14 ದಿನಕ್ಕೊಮ್ಮೆ ಕಬ್ಬಿನ ಬಿಲ್ ರೈತರ ಖಾತೆಗೆ ಜಮಾ ಮಾಡಬೇಕು,” ಎಂದು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. “ಸರ್ಕಾರದ ಆದೇಶವನ್ನು ಯಾವುದೇ ಕಾರ್ಖಾನೆ ಉಲ್ಲಂಘಿಸಿದರೆ ಕಠಿಣ ಹೋರಾಟ ಆರಂಭಿಸಲಾಗುವುದು,” ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಕಲಬುರ್ಗಿ ಘಟಕದ ಅಧ್ಯಕ್ಷ ರಮೇಶ್ ಎಸ್. ಹೂಗಾರ್ ಅವರುಎಚ್ಚರಿಸಿದ್ದಾರೆ.
ಈ ಹೋರಾಟ ಯಶಸ್ವಿಯಾಗಲು ಶ್ರಮಿಸಿದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ನಾಯಕರು ಚುನ್ನಪ್ಪ ಪೂಜಾರಿ, ಶಶಿಕಾಂತ ಗುರೂಜಿ, ಮತ್ತು ಎಲ್ಲ ರೈತ ನಾಯಕರು ಹಾಗೂ ಕಾರ್ಯಕರ್ತರಿಗೆ ಸಂಘದಿಂದ ಧನ್ಯವಾದ ಸಲ್ಲಿಸಲಾಗಿದೆ.
ಸರ್ಕಾರದ ಈ ನಿರ್ಧಾರವು ರೈತರ ಧ್ವನಿಗೆ ಸ್ಪಂದಿಸಿರುವ ಮೊದಲ ಹಂತವೆಂದು ಸಂಘವು ಹೇಳಿದೆ.
ರೈತರಿಗೆ ಮುಂದಿನ ದಿನಗಳಲ್ಲಿ ಅನ್ಯಾಯವಾದರೆ ನ್ಯಾಯಯುತ ಬೆಲೆಗಾಗಿ ಹೋರಾಟ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ.



