ಗೃಹ ಜ್ಯೋತಿ ಯೋಜನೆಯಲ್ಲಿ ಅಕ್ರಮ ಬಿಲ್ ವಸೂಲಿ ವಿರೋಧ — CPI ನೇತೃತ್ವದಲ್ಲಿ ಪ್ರತಿಭಟನೆ!
ಜೆಸ್ಕಾಂ ಅಧಿಕಾರಿಗಳ ಅನಿಯಮ ವಿರೋಧಿಸಿ CPI ಹಾಗೂ ರೈತ ಸಂಘಗಳ ಹೋರಾಟ

ಜೇವರ್ಗಿ: ಭಾರತ ಕಮ್ಯುನಿಸ್ಟ್ ಪಕ್ಷ (CPI), ಆದರ್ಶ ಗ್ರಾಮ ಸಮಿತಿ ಯಾಳವಾರ ಹಾಗೂ ಜೇವರ್ಗಿ–ಯಡ್ರಾಮಿ ತಾಲೂಕ ರೈತ ಹೋರಾಟ ಸಮಿತಿಗಳ ನೇತೃತ್ವದಲ್ಲಿ ಸಿಗರಥಹಳ್ಳಿ, ಚಿಗರಹಳ್ಳಿ, ಸೋಮನಾಥಹಳ್ಳಿ, ಕೊಡಚಿ ಗ್ರಾಮಗಳ ಜನತೆ ಇಂದು ಜೆವರ್ಗಿ ಜೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಉಚಿತವಾಗಿ ವಿದ್ಯುತ್ ಸಿಗಬೇಕಾದ ಸ್ಥಳಗಳಲ್ಲಿ ಕೆಲ ಗೃಹಕರಿಗೆ ಸಾವಿರಾರು ರೂಪಾಯಿಗಳ ಬಿಲ್ ನೀಡಲಾಗಿದ್ದು, ಕೆಲವರಿಗೆ ಶೂನ್ಯ ಬಿಲ್ ನೀಡಲಾಗಿರುವ ಅಸಮಾನತೆ ಹಾಗೂ ಬಿಲ್ ಹೊಂದಾಣಿಕೆ ಹೆಸರಿನಲ್ಲಿ ಕೆಲ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.
ಹಣ ನೀಡದವರ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು “ಜನರ ವಿದ್ಯುತ್ ಕತ್ತರಿಸೋದು ನಿಲ್ಲಿಸಿ! ಗೃಹ ಜ್ಯೋತಿ ಯೋಜನೆ ಜಾರಿಗೆ ಪಾರದರ್ಶಕತೆ ತರಲಿ!” ಎಂದು ಘೋಷಣೆ ಕೂಗಿದರು.
ಧರಣಿ ಸ್ಥಳಕ್ಕೆ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ (EE), ಸಹಾಯಕ ಇಂಜಿನಿಯರ್ (AEE) ಜೇವರ್ಗಿ, ಮತ್ತು KPTCL ಅಧಿಕಾರಿಗಳು ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಅಧಿಕಾರಿಗಳು ತಮ್ಮ ಇಲಾಖೆಯ ತಪ್ಪುಗಳನ್ನು ಒಪ್ಪಿಕೊಂಡು —
- ಗೃಹ ಜ್ಯೋತಿ ಯೋಜನೆಯಡಿ ಎಲ್ಲ ಗೃಹಕರಿಗೂ ಶೂನ್ಯ ಬಿಲ್ ನೀಡಲಾಗುತ್ತದೆ,
- ಅನಧಿಕೃತವಾಗಿ ಹಣ ವಸೂಲಿ ಮಾಡಿದವರ ಹಣವನ್ನು ರಿಫಂಡ್ ಮಾಡಲಾಗುತ್ತದೆ,
- ಹೊಸ ಸಬ್ಸ್ಟೇಷನ್ ನಿರ್ಮಾಣಕ್ಕಾಗಿ ರೈತರಿಂದ 15 ದಿನಗಳಲ್ಲಿ ಜಮೀನು ಖರೀದಿಸಿ, ಕೆಲಸವನ್ನು ಮುಂದಿನ ತಿಂಗಳಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಭರವಸೆಯ ಹಿನ್ನೆಲೆಯಲ್ಲಿ ಹೋರಾಟ ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಡಾ. ಮಹೇಶ್ ಕುಮಾರ್ ರಾಠೋಡ, ಇಬ್ರಾಹಿಂ ಪಟೇಲ್ ಯಾಳವಾರ, ಬಾಬು ಬಿ. ಪಾಟೀಲ್, ರಾಜಾ ಪಟೇಲ್, ಅಖಿಲ್ ಪಾಶ, ಸದ್ದಾಮ್ ಪಟೇಲ್, ರಿಜ್ವಾನ್ ಪಟೇಲ್, ಶಾಂತಯ್ಯ ಗುತ್ತೇದಾರ್, ಅಜೀಜ್ ಪಟೇಲ್, ಹುಸೇನ್ ಪಟೇಲ್, ಟೀಪು ಸುಲ್ತಾನ್, ಜಾಫರ್ ಪಟೇಲ್, ದಾವೂದ್ ಹಾರ್ನೂರ್, ಮಹಮ್ಮದ್ ಚೌದ್ರಿ, ಗಫೂರ್ ಪಟೇಲ್ ಹಾಗೂ ಅನೇಕ ರೈತರು, ಕಾರ್ಯಕರ್ತರು ಉಪಸ್ಥಿತರಿದ್ದರು.



