ಕಮರವಾಡಿ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ : ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ

ಚಿತ್ತಾಪುರ: ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಲಿಕೆ ಟಾಟಾ ಟ್ರಸ್ಟ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಭಾಗಿತ್ವದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆದಿದ್ದು, ಗ್ರಾಮಸ್ಥರು ಹಾಗೂ ಯುವಕರು ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಸಕ್ಕರೆ ಕಾಯಿಲೆ, ನೇತ್ರ ತಪಾಸಣೆ, ಬಿಪಿ, ಸಕ್ಕರೆ ಕಾಯಿಲೆ, ಕ್ಷಯರೋಗದ ಲಕ್ಷಣ, ರಾತ್ರಿ ವೇಳೆಯಲ್ಲಿ ಜ್ವರ ಬರುವುದು, ರಕ್ತದ ಒತ್ತಡ ಹಾಗೂ ಇನ್ನಿತರ ಆರೋಗ್ಯಕ್ಕೆ ಸಂಬAಧಪಟ್ಟAತೆ ಆರೋಗ್ಯ ಇಲಾಖೆ ವೈದ್ಯರು ಸಾರ್ವಜನಿಕರಿಗೆ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ವಾಡಿ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ದಂತ ವೈದ್ಯಾಧಿಕಾರಿ ಡಾ.ಸಾವಿತ್ರಿ ಗಲಾಗಲಿ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಸಾಮಾನ್ಯವಾಗಿ ಕಾಣುತ್ತಿದ್ದೇವೆ. ಧೂಮಪಾನ ಮತ್ತು ತಂಬಾಕು ಸೇವನೆ ಆರೋಗ್ಯಕ್ಕೆ ಬಹುದೊಡ್ಡ ಹಾನಿಕಾರವಾಗಿದೆ. ಆರೋಗ್ಯಕ್ಕೆ ಯಾರು ಮಹತ್ವ ನೀಡುತ್ತಾರೋ ಅವರ ಆರೋಗ್ಯ ಸದೃಢವಾಗಿರುತ್ತದೆ. ಸಣ್ಣ ವಯಸ್ಸಿನಲ್ಲೇ ದುಶ್ಚಟಗಳಿಗೆ ಬಲಿಯಾದರೆ ಮಾರಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಆರೋಗ್ಯಕ್ಕೆ ಹಾನಿಮಾಡುವ ವಸ್ತುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಇಲಾಖೆಯ ಐಸಿಟಿಸಿ ಸಮಾಲೋಚಕಿ ಸಂಯೋಜಕಿ ಜಗದೇವಿ ಮಾತನಾಡಿ, ಮಾನಸಿಕ ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬಸ್ಥರು ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಅವರ ಮನಸಿಗೆ ನೋವಾಗದಂತೆ ನೋಡಿಕೊಳ್ಳಬೇಕು ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಮಂಜೂಳಾ ಬುಳ್ಳಾ ಮಾತನಾಡಿದರು. ಕಲಿಕೆ ಟಾಟಾ ಟ್ರಸ್ಟ್–ಯಾದಗಿರಿ ಸಂಯೋಜಕ ಆಂಜನೇಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯದ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಆಫ್ರಿನಾ ಬೇಗಂ ಗ್ರಾಮದ ಹಿರಿಯರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಿದರು.
ಗ್ರಂಥಪಾಲಕಿ ಸುಮಿತ್ರಾ ಐನಾಪುರ, ಪ್ರಾಥಮಿಕ ಸುರಕ್ಷಾ ಅಧಿಕಾರಿ ಸುಧಾರಾಣಿ ದೇಸಾಯಿ, ರಕ್ತ ತಪಾಸಣೆ ಅಧಿಕಾರಿ ಮಹಾದೇವ, ಗ್ರಾಪಂ ಕಾರ್ಯದರ್ಶಿ ಗಾಯತ್ರಿ, ಕರವಸೂಲಿಗಾರ ಶಿವಪುತ್ರಪ್ಪ ಹೊಟ್ಟಿ, ಕಲಿಕೆ ಟಾಟಾ ಟ್ರಸ್ಟ್ ಮೇಲ್ವಿಚಾರಕಿ ಗುಂಡಮ್ಮ ಕಾಶೇಟ್ಟಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಗಣ್ಯರು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರ ಆರೋಗ್ಯ ತಪಾಸಣೆ ನಡೆಸಲಾಯಿತು.



