ಮೋದಿಯವರ 4 ಕಾರ್ಮಿಕ ಸಂಹಿತೆ ಜಾರಿಗೆ ವಿರುದ್ಧ ಸಿ.ಐ.ಟಿ.ಯು ಪ್ರತಿಭಟನೆ

ಕಲಬುರಗಿ: ಶುಕ್ರವಾರ ರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಚಾನಕ್ವಾಗಿ 4 ಕಾರ್ಮಿಕ ಸಂಹಿತೆ (ಲೇಬರ್ ಕೋಡ್ಸ್)ಗಳನ್ನು ಜಾರಿಗೊಳಿಸಿರುವುದು ದೇಶದ ಕಾರ್ಮಿಕ ವರ್ಗದ ಮೇಲೆ “ನರಸಂಹಾರದಂತ ದಾಳಿ” ಎಂದು ಸಿ.ಐ.ಟಿ.ಯು ಕಲಬುರಗಿ ಜಿಲ್ಲಾ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ನಗರದ ತಿಮ್ಮಾಪೂರಿ ಚೌಕ್ನಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಮುಖಂಡರು, “ಇದು ಕಾರ್ಮಿಕರ ಮೇಲಿನ ಯುದ್ಧ. ಸಂಹಿತೆಗಳನ್ನು ಹಿಂತೆಗೆದುಕೊಳ್ಳುವ ತನಕ ಕಾರ್ಮಿಕ ವರ್ಗ ನಿರ್ಣಾಯಕ ಹೋರಾಟ ನಡೆಸಲಿದೆ,” ಎಂದು ಘೋಷಿಸಿದರು.
ಕಾರ್ಮಿಕರ ಹಕ್ಕುಗಳಿಗೆ ಮರಣಶಾಸನದಂತೆ ಪರಿಣಮಿಸಿರುವ ಈ ನಾಲ್ಕು ಸಂಹಿತೆಗಳು ಜಾರಿಗೆ ಬಂದಿರುವುದರಿಂದ ದೇಶಾದ್ಯಂತ ಕಾರ್ಮಿಕರು ಕಿಡಿಕಾರಿದ್ದಾರೆ.
ನವೆಂಬರ್ 26, 2025 ರಂದು ಕಿಸಾನ್ ಮೊರ್ಚಾ ಸೇರಿದಂತೆ ಜನಪರ ಸಂಘಟನೆಗಳ ಜತೆ ಜಂಟಿಯಾಗಿ ರಾಷ್ಟ್ರವ್ಯಾಪಿ ಆಂದೋಲನ ನಡೆಸಲಿದ್ದು, ದೇಶದಾದ್ಯಂತ ಕಾರ್ಮಿಕ ಸಂಹಿತೆಗಳನ್ನು ದಹನ ಮಾಡಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಎಂ.ಬಿ. ಸಜ್ಜನ್, ಉಪಾಧ್ಯಕ್ಷೆ ಗೌರಮ್ಮ ಪಾಟೀಲ, ಅಯ್ಯಪ್ಪ ಕರಗಾರ, ಕಾರ್ಮಿಕ ಮುಖಂಡರು ಶೇಕಮ್ಮ ಕುರಿ, ನಾಗಯ್ಯಾ ಸ್ವಾಮಿ, ನಾಗರಾಜ, ಅಂಜನಾ, ಜಗದೇವಿ ಸೇರಿದಂತೆ ಹಲವರು ಭಾಗವಹಿಸಿದ್ದರು.



