ಕಡಕೋಳದಲ್ಲಿ ಕಟ್ಟಡ ಕಾರ್ಮಿಕರ ಸಂಘ ಸಮಿತಿ ಉದ್ಘಾಟನೆ

ಯಡ್ರಾಮಿ: ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಇಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಸಂಘ (KSCWCU/NCL), ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಗ್ರಾಮ ಸಮಿತಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಉದ್ಘಾಟನಾ ಸಮಾರಂಭವನ್ನು ಕಡಕೋಳ ಮಡಿವಾಳೇಶ್ವರ ಮಠದ ಪೂಜ್ಯ ಡಾ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ KSCWCU/NCL ರಾಜ್ಯ ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ, “ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಸಂಘಟಿತರಾಗಬೇಕು. ಕಾರ್ಮಿಕರ ಇಲಾಖೆಯಿಂದ ಬರುವ ಸೌಲಭ್ಯಗಳನ್ನು ಪ್ರತಿಯೊಬ್ಬ ಕಾರ್ಮಿಕರು ಪಡೆಯಲು ಸಂಘಟನೆ ಅಗತ್ಯ,” ಎಂದು ಕರೆ ನೀಡಿದರು.
ಕಾರ್ಮಿಕರಿಗೆ ಮಂಡಳಿಯಿಂದ ದೊರೆಯುವ 12 ರೀತಿಯ ಕಲ್ಯಾಣ ಸೌಲಭ್ಯಗಳ ಬಗ್ಗೆ ಈ ಸಂದರ್ಭದಲ್ಲಿ ಜಾಗೃತಿ ಮೂಡಿಸಲಾಯಿತು. KSCWCU/NCL ರಾಜ್ಯ ಅಧ್ಯಕ್ಷ ಎನ್.ಪಿ. ಸಾಮಿ ಅವರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಸಂಘವನ್ನು ಬಲಪಡಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾಜಿ ಸದಸ್ಯರು ಹಾಗೂ ರಾಜ್ಯ ಉಪಾಧ್ಯಕ್ಷರಾದ ಶಂಕರ ಕಟ್ಟಿಸಂಗಾವಿ, ಜಿಲ್ಲಾ ಉಪಾಧ್ಯಕ್ಷ ಮೋಸಿನ ಪಟೇಲ, ಯಡ್ರಾಮಿ ತಾಲೂಕಾಧ್ಯಕ್ಷ ಹೊನ್ನಪ್ಪ ಭೀ.ಕೆ. ಸುಂಬಡ, ಜೇವರ್ಗಿ ತಾ. ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಕಲ್ಲೂರ, ಜನಸೇವ ಕಟ್ಟಡ ಕಾರ್ಮಿಕರ ಸಂಘ ಗೌರವಾಧ್ಯಕ್ಷ ಮೈಬೂಬ ಗುಟ್ಟೇದಾರ, ಹಿರಿಯ ಮುಖಂಡ ದಶರಥ ಗುಟ್ಟೇದಾರ, ಯಡ್ರಾಮಿ ತಾಲೂಕ ಗೌರವಾಧ್ಯಕ್ಷ ಈರಣ್ಣ ಪತ್ತಾರ, ಇಜೇರಿ ಘಟಕ ಅಧ್ಯಕ್ಷ ಗೋವಿಂದ, ಕಾರ್ಮಿಕರ ಇಲಾಖೆಯ ಡಿಇಓ ಅನಂತಕುಮಾರ, ತಾಲೂಕಾ ಉಪಾಧ್ಯಕ್ಷ ಭೀಮರಾಯಗೌಡ ಕಡಕೋಳ ಸೇರಿದಂತೆ ಸಂಘದ ಹಲವಾರು ಪದಾಧಿಕಾರಿಗಳು ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಜರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಚೈತನ್ಯ ತುಂಬಿದರು.



