ಜಿಲ್ಲಾ ಮಟ್ಟದ ಉತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿಗೆ ವಿಶ್ವನಾಥ ರಾಠೋಡ

ಚಿತ್ತಾಪುರ: ವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ವಿಶ್ವನಾಥ ರಾಠೋಡ ಅವರಿಗೆ 2026–27ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಚಿತ್ರಕಲಾ ಶಿಕ್ಷಕ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಕರ್ನಾಟಕ ರಾಜ್ಯ ಪ್ರೈಸ್ ಪ್ರಾಂಶುಪಾಲರ ಸಂಘ (KSKPA) ಹಾಗೂ ವಸತಿ ಶಾಲಾ ನೌಕರರ ಸಂಘ (RSEA) ಕಲಬುರಗಿ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ವಸತಿ ಶಾಲಾ ನೌಕರರ ಶೈಕ್ಷಣಿಕ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿದ್ಯಾರ್ಥಿಗಳ ಉತ್ತಮ ಶೈಕ್ಷಣಿಕ ಫಲಿತಾಂಶಕ್ಕಾಗಿ ಶ್ರಮಿಸುವುದರ ಜತೆಗೆ ಚಿತ್ರಕಲಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳೆಸುವಲ್ಲಿ ವಿಶ್ವನಾಥ ರಾಠೋಡ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ನಿರಂತರವಾಗಿ ಶ್ರಮಿಸಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಕೀರ್ತಿ ತಂದಿರುವ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾ ಮಟ್ಟದ ಉತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿಗೆ ಗೌರವಿಸಲಾಗಿದೆ ಎಂದು ಆರ್ಎಸ್ಇಎ ಅಧ್ಯಕ್ಷ ಆನಂದ ಕೊಡೆಕಲ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬೆಳಗುಂಪಿ, ಕೆಎಸ್ಕೆಪಿಎ ಅಧ್ಯಕ್ಷ ಶಿವರಾಮ ಚವ್ಹಾಣ ಹಾಗೂ ಪ್ರಧಾನ ಕಾರ್ಯದರ್ಶಿ ಈರಣ್ಣ ಅರಿಕೇರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



