ಸಾವಿತ್ರಿಬಾಯಿ ಫುಲೆ: ನಿನ್ನೆಗಿನ ಹೋರಾಟ, ಇಂದಿನ ಅಗತ್ಯ

ಲೇಖನ: ಶಿವಲಿಂಗಪ್ಪ ಕಿನ್ನೂರ
ಭಾರತೀಯ ಸಮಾಜದ ಇತಿಹಾಸದಲ್ಲಿ ಸಾವಿತ್ರಿಬಾಯಿ ಫುಲೆ ಎಂಬ ಹೆಸರು ಕೇವಲ ಒಂದು ವ್ಯಕ್ತಿಯ ಪರಿಚಯವಲ್ಲ; ಅದು ಸಾಮಾಜಿಕ ಕ್ರಾಂತಿಯ ಜೀವಂತ ಸಂಕೇತ. 1831ರ ಜನವರಿ 3ರಂದು ಮಹಾರಾಷ್ಟ್ರದ ನೈಗಾಂವ್ನಲ್ಲಿ ಜನಿಸಿದ ಸಾವಿತ್ರಿಬಾಯಿ ಫುಲೆ, ಭಾರತದ ಮೊದಲ ಮಹಿಳಾ ಶಿಕ್ಷಕಿ, ಮಹಾನ್ ಸಮಾಜ ಸುಧಾರಕಿ ಮತ್ತು ಮಹಿಳಾ ವಿಮೋಚನೆಯ ದೀಪಸ್ತಂಭರಾಗಿದ್ದಾರೆ. ಹೆಣ್ಣುಮಕ್ಕಳಿಗೆ ಅಕ್ಷರವೇ ಅಪರಾಧವಾಗಿದ್ದ ಕಾಲದಲ್ಲಿ, ಶಿಕ್ಷಣವೇ ಮುಕ್ತಿ ಎಂಬ ನಂಬಿಕೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡವರು ಅವರು.
ಬಾಲ್ಯವಿವಾಹದ ನಂತರ ಪತಿ ಮಹಾತ್ಮ ಜ್ಯೋತಿರಾವ್ ಫುಲೆ ಅವರ ಪ್ರೇರಣೆಯಿಂದ ಸಾವಿತ್ರಿಬಾಯಿ ಶಿಕ್ಷಣ ಪಡೆದರು. 1848ರಲ್ಲಿ ಪುಣೆಯ ಭಿಡೆ ವಾಡಾದಲ್ಲಿ ಬಾಲಕಿಯರಿಗಾಗಿ ಭಾರತದ ಮೊದಲ ಶಾಲೆಯನ್ನು ಆರಂಭಿಸುವ ಮೂಲಕ ಅವರು ಸಮಾಜದ ಕಟ್ಟುಪಾಡುಗಳಿಗೆ ನೇರ ಸವಾಲು ಎಸೆದರು. ಶಾಲೆಗೆ ಹೋಗುವಾಗ ಕಲ್ಲು–ಮಣ್ಣು ಎಸೆತ, ಅವಹೇಳನೆ, ತಿರಸ್ಕಾರಗಳನ್ನು ಎದುರಿಸಬೇಕಾಯಿತು. ಆದರೂ ಅವರು ಹಿಂಜರಿಯಲಿಲ್ಲ. ಸಮಾಜದ ಅಂಧಕಾರದ ನಡುವೆ ಶಿಕ್ಷಣದ ಬೆಳಕನ್ನು ಹಚ್ಚಿದ ಧೈರ್ಯಶಾಲಿ ಮಹಿಳೆ ಸಾವಿತ್ರಿಬಾಯಿ ಫುಲೆ.
ಸಾವಿತ್ರಿಬಾಯಿ ಫುಲೆ ಶಿಕ್ಷಣವನ್ನು ಕೇವಲ ಅಕ್ಷರಜ್ಞಾನವಾಗಿ ನೋಡಲಿಲ್ಲ; ಅದು ಸಮಾಜ ಪರಿವರ್ತನೆಯ ಅತ್ಯಂತ ಶಕ್ತಿಯುತ ಅಸ್ತ್ರವೆಂದು ಅವರು ನಂಬಿದ್ದರು. “ಶಿಕ್ಷಣವೇ ಮುಕ್ತಿ” ಎಂಬ ಅವರ ಚಿಂತನೆ ಇಂದಿನ ದಿನಗಳಲ್ಲಿ ಇನ್ನಷ್ಟು ಪ್ರಸ್ತುತವಾಗಿದೆ. ನಾವು ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದರೂ, ಗ್ರಾಮೀಣ ಪ್ರದೇಶಗಳು, ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಇನ್ನೂ ಕನಸಾಗಿಯೇ ಉಳಿದಿದೆ. ಇದರಿಂದ ಸಾವಿತ್ರಿಬಾಯಿ ಆರಂಭಿಸಿದ ಹೋರಾಟ ಇಂದಿಗೂ ಪೂರ್ಣಗೊಂಡಿಲ್ಲ ಎಂಬ ಸತ್ಯ ಸ್ಪಷ್ಟವಾಗುತ್ತದೆ.
ಮಹಿಳಾ ಸ್ವಾತಂತ್ರ್ಯ ಮತ್ತು ಸಮಾನತೆಯ ವಿಚಾರದಲ್ಲಿ ಸಾವಿತ್ರಿಬಾಯಿ ಫುಲೆ ತಮ್ಮ ಕಾಲಕ್ಕಿಂತ ಶತಮಾನ ಮುಂಚಿತವಾಗಿದ್ದರು. ಬಾಲ್ಯವಿವಾಹ, ವಿಧವಾ ದೌರ್ಜನ್ಯ, ಮಹಿಳೆಯರ ಮೇಲೆ ನಡೆಯುತ್ತಿದ್ದ ಸಾಮಾಜಿಕ ದಮನಗಳ ವಿರುದ್ಧ ಅವರು ನಿರ್ಭೀತಿಯಾಗಿ ಧ್ವನಿ ಎತ್ತಿದರು. ಇಂದಿನ ದಿನಗಳಲ್ಲಿ ಮಹಿಳೆಯರು ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮುಂದೆ ಬಂದಿದ್ದರೂ, ಲೈಂಗಿಕ ದೌರ್ಜನ್ಯ, ಅಸಮಾನ ವೇತನ, ಗೃಹಹಿಂಸೆ ಮೊದಲಾದ ಅನೇಕ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಇದು ಸಾವಿತ್ರಿಬಾಯಿ ಫುಲೆ ಅವರ ಹೋರಾಟಗಳ ಅಗತ್ಯತೆ ಇಂದಿಗೂ ಅಷ್ಟೇ ಮಹತ್ವದ್ದಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಜಾತಿ ವ್ಯವಸ್ಥೆಯ ವಿರುದ್ಧ ಸಾವಿತ್ರಿಬಾಯಿ ಫುಲೆ ಮತ್ತು ಮಹಾತ್ಮ ಜ್ಯೋತಿರಾವ್ ಫುಲೆ ನಡೆಸಿದ ಹೋರಾಟವು ಇಂದಿನ ಪ್ರಜಾಸತ್ತಾತ್ಮಕ ಭಾರತದಲ್ಲೂ ಅಷ್ಟೇ ಪ್ರಸ್ತುತವಾಗಿದೆ. ಸಂವಿಧಾನಾತ್ಮಕ ಹಕ್ಕುಗಳು ಇದ್ದರೂ, ಸಾಮಾಜಿಕವಾಗಿ ಅಸ್ಪೃಶ್ಯತೆ, ಭೇದಭಾವ ಮತ್ತು ಶೋಷಣೆ ಹಲವು ರೂಪಗಳಲ್ಲಿ ಮುಂದುವರಿದಿವೆ. ಸಾವಿತ್ರಿಬಾಯಿ ಫುಲೆ ಅವರ ವಿಚಾರಗಳು ಕೇವಲ ಜನ್ಮದಿನದ ಆಚರಣೆಗೆ ಸೀಮಿತವಾಗದೇ, ಸಮಾಜದ ದೈನಂದಿನ ನಡವಳಿಕೆಯಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳಾಗಿವೆ.
ಇಂದು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಆಚರಿಸುವಾಗ, ಹಾರ–ಪುಷ್ಪಗಳ ಮೂಲಕವಲ್ಲ, ಅವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡುವುದೇ ನಿಜವಾದ ಗೌರವ. ಶಿಕ್ಷಣದಲ್ಲಿ ಸಮಾನತೆ, ಮಹಿಳೆಯರಿಗೆ ಗೌರವ ಮತ್ತು ಭದ್ರತೆ, ಜಾತಿ–ಲಿಂಗ ಭೇದವಿಲ್ಲದ ಮಾನವೀಯ ಸಮಾಜ ನಿರ್ಮಾಣ – ಇದೇ ಸಾವಿತ್ರಿಬಾಯಿ ಫುಲೆ ಅವರ ಕನಸು.
ಸಾವಿತ್ರಿಬಾಯಿ ಫುಲೆ ನಮ್ಮ ನಿನ್ನೆಗಿನ ಹೋರಾಟವಷ್ಟೇ ಅಲ್ಲ, ಇಂದಿನ ಅಗತ್ಯ ಮತ್ತು ಭವಿಷ್ಯದ ದಾರಿ ತೋರಿಸುವ ದೀಪವೂ ಹೌದು. ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ, ಅವರ ಜನ್ಮದಿನದ ಆಚರಣೆ ಸಾರ್ಥಕವಾಗುತ್ತದೆ.


