ರಾಷ್ಟ್ರೀಯ ಸುದ್ದಿ

2020ರ ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಣೆ

ನವದೆಹಲಿ: 2020ರ ಉತ್ತರ–ಪೂರ್ವ ದೆಹಲಿ ಗಲಭೆಗಳಿಗೆ ಸಂಬಂಧಿಸಿದ ಯುಎಪಿಎ (UAPA) ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಸೋಮವಾರ (ಜನವರಿ 5) ನಿರಾಕರಿಸಿದೆ. ಆದರೆ ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಗಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಬ್ ಅಹ್ಮದ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗಳ ಮೇಲೆ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠ ಈ ತೀರ್ಪು ಪ್ರಕಟಿಸಿತು. ಡಿಸೆಂಬರ್ 10ರಂದು ಎಲ್ಲ ಪಕ್ಷಗಳ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು.

ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಪ್ರಕರಣದಲ್ಲಿ ಇತರ ಆರೋಪಿಗಳಿಗಿಂತ “ಭಿನ್ನ ಸ್ಥಿತಿಯಲ್ಲಿ ನಿಂತಿದ್ದಾರೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಇವರ ವಿರುದ್ಧ ಪ್ರಾಥಮಿಕವಾಗಿ ಆರೋಪಗಳನ್ನು ಬೆಂಬಲಿಸುವ ಸಾಕ್ಷ್ಯಾಧಾರಗಳು ಲಭ್ಯವಿವೆ ಎಂದು ಕೋರ್ಟ್ ತಿಳಿಸಿದೆ. ಇನ್ನು ಉಳಿದ ಐವರಿಗೆ ಜಾಮೀನು ನೀಡಿದರೂ, ಅವರ ಮೇಲಿನ ಆರೋಪಗಳು ದುರ್ಬಲಗೊಂಡಿವೆ ಎಂಬ ಅರ್ಥದಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿ, 12 ಕಠಿಣ ಷರತ್ತುಗಳನ್ನು ವಿಧಿಸಿದೆ.

ತೀರ್ಪಿನಲ್ಲಿ ಕೋರ್ಟ್, “ವಿಚಾರಣೆ ವಿಳಂಬವಾಗುತ್ತಿರುವುದು ನ್ಯಾಯಾಂಗ ಪರಿಶೀಲನೆಯನ್ನು ಗಟ್ಟಿಗೊಳಿಸುವ ಕಾರಣವಾಗುತ್ತದೆ. ವಿಚಾರಣೆಗೆ ಮುನ್ನದ ಬಂಧನವನ್ನು ಶಿಕ್ಷೆಯಂತೆ ಪರಿಗಣಿಸಲಾಗುವುದಿಲ್ಲ. ಸ್ವಾತಂತ್ರ್ಯ ಹರಣ ಅಚ್ಛಂದವಾಗಿರಬಾರದು” ಎಂದು ಹೇಳಿತು. ಜೊತೆಗೆ, ಯುಎಪಿಎ ಒಂದು ವಿಶೇಷ ಕಾನೂನಾಗಿದ್ದು, ಜಾಮೀನಿನ ವಿಚಾರದಲ್ಲಿ ಸಾಮಾನ್ಯ ಕಾನೂನುಗಳಿಂದ ಭಿನ್ನವಾದ ನಿಯಮಗಳನ್ನು ಹೊಂದಿದೆ; ಆದರೆ ಅದು ನ್ಯಾಯಾಂಗ ಪರಿಶೀಲನೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕುವುದಿಲ್ಲ ಎಂದು 43D(5) ವಿಧಾನದ ಕುರಿತು ವಿವರಿಸಿತು.

ಉಮರ್ ಖಾಲಿದ್ 2020ರ ಸೆಪ್ಟೆಂಬರ್ 13ರಿಂದ ಜೈಲಿನಲ್ಲಿ ಇದ್ದರೆ, ಶರ್ಜೀಲ್ ಇಮಾಮ್ ಜನವರಿ 28, 2020ರಿಂದ ಬಂಧನದಲ್ಲಿದ್ದಾರೆ. ಫೆಬ್ರವರಿ 2020ರಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ನಂತರ ಉತ್ತರ–ಪೂರ್ವ ದೆಹಲಿಯ ಕೆಲ ಭಾಗಗಳಲ್ಲಿ ಗಲಭೆಗಳು ನಡೆದವು. ಬಳಿಕ ದೆಹಲಿ ಪೊಲೀಸರು “ದೊಡ್ಡ ಸಂಚು” ಆರೋಪದಡಿ ಯುಎಪಿಎ ಸೇರಿದಂತೆ ಕಠಿಣ ಕಾನೂನುಗಳ ಅಡಿಯಲ್ಲಿ ಹಲವು ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದರು.

ಆರೋಪಿಗಳ ಪರ ವಕೀಲರು ಭಾಷಣಗಳು ಮತ್ತು ವಾಟ್ಸಾಪ್ ಚಾಟ್‌ಗಳನ್ನು ಆಯ್ಕೆಮಾಡಿ ಕತ್ತರಿಸಿ ತಪ್ಪು ಚಿತ್ರಣ ಸೃಷ್ಟಿಸಲಾಗಿದೆ ಎಂದು ವಾದಿಸಿದರೂ, ದೆಹಲಿ ಹೈಕೋರ್ಟ್ (ನ್ಯಾಯಮೂರ್ತಿಗಳಾದ ನವಿನ್ ಚಾವ್ಲಾ ಮತ್ತು ಶಲಿಂದರ್ ಕೌರ್) ತನಿಖಾ ಸಂಸ್ಥೆಗಳು ಸಂಗ್ರಹಿಸಿದ ದಾಖಲೆಗಳು ಸಂಯೋಜಿತ ಸಂಚುವಿನ ಪ್ರಾಥಮಿಕ ಸುಳಿವು ನೀಡುತ್ತವೆ ಎಂದು ಹೇಳಿ, ಖಾಲಿದ್ ಮತ್ತು ಇಮಾಮ್ ಅವರನ್ನು ಹಿಂಸಾಚಾರದ “ಬೌದ್ಧಿಕ ಶಿಲ್ಪಿಗಳು” ಎಂದು ವರ್ಣಿಸಿತ್ತು.

Related Articles

Leave a Reply

Your email address will not be published. Required fields are marked *

Back to top button