ಕಲ್ಯಾಣ ಕರ್ನಾಟಕರಾಜ್ಯ

UPSC ಪರೀಕ್ಷೆಗೆ ದೂರ ಪ್ರಯಾಣ ಬೇಡ! ಕಲಬುರಗಿಯಲ್ಲಿ ಕೇಂದ್ರ ಆರಂಭಿಸುವಂತೆ ಮನವಿ

“ಕಲ್ಯಾಣ ಕರ್ನಾಟಕ ಭಾಗದ ಯುವ ಪದವಿಧರರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ UPSC ಸ್ಪರ್ಧಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟು, ಕಲಬುರಗಿಯಲ್ಲಿ UPSC ಪರೀಕ್ಷಾ ಕೇಂದ್ರ ಸ್ಥಾಪನೆ ಅನಿವಾರ್ಯವಾಗಿದೆ. ಇದು ಈ ಭಾಗದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಮಹತ್ವದ ಹೆಜ್ಜೆಯಾಗಲಿದೆ”-ಬಿ.ಎಂ. ರಾವೂರ,ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ (ರಿ)ಕಾರ್ಯದರ್ಶಿ, ಕಲಬುರಗಿ.

ಕಲ್ಯಾಣ ಕರ್ನಾಟಕ ವಿಭಾಗೀಯ ಆಡಳಿತ ಕೇಂದ್ರವಾಗಿರುವ ಕಲಬುರಗಿ ನಗರದಲ್ಲಿ ಕೇಂದ್ರ ಸಾರ್ವಜನಿಕ ಲೋಕಸೇವಾ ಆಯೋಗ (UPSC) ನಡೆಸುವ ನೂತನ ಪರೀಕ್ಷಾ ಕೇಂದ್ರವನ್ನು ತ್ವರಿತವಾಗಿ ಆರಂಭಿಸಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ (ರಿ), ಕಲಬುರಗಿ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಕಲಬುರಗಿ ನಗರವು ದೇಶದ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ರೂಪುಗೊಂಡಿದ್ದು, ಕೇಂದ್ರ ವಿಶ್ವವಿದ್ಯಾಲಯ (ಕರ್ನಾಟಕ), ಗುಲಬರ್ಗಾ ವಿಶ್ವವಿದ್ಯಾಲಯ, ಶರಣಬಸವ ವಿಶ್ವವಿದ್ಯಾಲಯ, ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ವೈದ್ಯಕೀಯ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ನೀಡುವ ಹತ್ತಾರು ಸರ್ಕಾರಿ ಮತ್ತು ಖಾಸಗಿ ಮಹಾವಿದ್ಯಾಲಯಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ನಗರದಲ್ಲಿ ಖಾಸಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತರಬೇತಿ ಕೇಂದ್ರಗಳಿದ್ದರೂ, ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸುವ ಅಖಿಲ ಭಾರತ ಮಟ್ಟದ ಪರೀಕ್ಷೆಗಳಿಗೆ ಕಲಬುರಗಿಯಲ್ಲಿ ಅಧಿಕೃತ ಪರೀಕ್ಷಾ ಕೇಂದ್ರ ಇಲ್ಲದಿರುವುದು ಈ ಭಾಗದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗುತ್ತಿದೆ. ಪರಿಣಾಮವಾಗಿ, ಸಾವಿರಾರು UPSC ಸ್ಪರ್ಧಾರ್ಥಿಗಳು ನವದೆಹಲಿ, ಹೈದರಾಬಾದ್, ಪುಣೆ, ಮುಂಬೈ, ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ–ಧಾರವಾಡ ಮುಂತಾದ ದೂರದ ನಗರಗಳಿಗೆ ತೆರಳಿ ಪರೀಕ್ಷೆ ಬರೆಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ದೂರ ಪ್ರಯಾಣ, ಹೆಚ್ಚಾದ ವೆಚ್ಚ, ವಸತಿ ಸಮಸ್ಯೆ ಹಾಗೂ ಮಾನಸಿಕ ಒತ್ತಡಗಳಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಇದು ಈ ಭಾಗದ ಯುವಶಕ್ತಿಗೆ ದೊಡ್ಡ ಅಡ್ಡಿಯಾಗಿದ್ದು, ಸಮಾನ ಅವಕಾಶಗಳ ತತ್ವಕ್ಕೆ ವಿರುದ್ಧವಾಗಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಕೇಂದ್ರ ಲೋಕಸೇವಾ ಆಯೋಗ (UPSC) ತನ್ನ ಪಾರದರ್ಶಕತೆ, ನ್ಯಾಯಸಮ್ಮತತೆ ಹಾಗೂ ಅರ್ಹತೆಯ ಸಂಕೇತವಾಗಿ ದೇಶದಾದ್ಯಂತ ಗುರುತಿಸಿಕೊಂಡಿದೆ. 2026ರಲ್ಲಿ UPSC ಶತಮಾನೋತ್ಸವ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪರೀಕ್ಷಾ ಸೌಲಭ್ಯಗಳನ್ನು ವಿಸ್ತರಿಸುವ ಅಗತ್ಯವಿದೆ ಎಂದು ಇತ್ತೀಚೆಗೆ UPSC ಅಧ್ಯಕ್ಷ ಅಜಯಕುಮಾರ ಅವರು ಮಾಹಿತಿ ಸಂವಾದದಲ್ಲಿ ತಿಳಿಸಿರುವುದನ್ನು ದಿನಪತ್ರಿಕೆಗಳು ಪ್ರಕಟಿಸಿವೆ.

2013ರಲ್ಲಿ ಜಾರಿಗೆ ಬಂದ ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನದ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶವಿದೆ. ಈ ಹಿನ್ನಲೆಯಲ್ಲಿ ಕಲಬುರಗಿ ನಗರದಲ್ಲಿ UPSC ನೂತನ ಪರೀಕ್ಷಾ ಕೇಂದ್ರ ಸ್ಥಾಪಿಸುವ ಕುರಿತು ರಾಜ್ಯ ಸರ್ಕಾರವು ಕೇಂದ್ರ ಸಾರ್ವಜನಿಕ ಲೋಕಸೇವಾ ಆಯೋಗದ ನವದೆಹಲಿ ಕಚೇರಿಗೆ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕೆಂದು ಸಂಘಟನೆ ಆಗ್ರಹಿಸಿದೆ.

ಈ ಮನವಿಗೆ ಕಲ್ಯಾಣ ಕರ್ನಾಟಕ ಅಲೆಮಾರಿ ಹಾಗೂ ಅರೆ-ಅಲೆಮಾರಿ ಹಿಂದುಳಿದ ವರ್ಗಗಳ ಸಮುದಾಯಗಳ ಮಹಾಸಮಿತಿ (ರಿ) ಸಹ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ತಕ್ಷಣ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

Related Articles

Leave a Reply

Your email address will not be published. Required fields are marked *

Back to top button