ಕೇಂದ್ರ ಬಜೆಟ್ನಲ್ಲಿ ಕಲಬುರಗಿಗೆ ಏಮ್ಸ್, ಚತುಷ್ಪಥ ಹೆದ್ದಾರಿ, ರೈಲ್ವೆ ವಿಭಾಗಕ್ಕೆ ಆಗ್ರಹ
ರಾಜ್ಯ ಸರ್ಕಾರ ಕೇಂದ್ರಕ್ಕೆ ನಿಯೋಗ ಕಳುಹಿಸಬೇಕೆಂದು ಒತ್ತಾಯ

ಕಲಬುರಗಿ:ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಘೋಷಿಸಬೇಕೆಂದು ಒತ್ತಾಯಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಕಲಬುರಗಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳನ್ನು ನಾಲ್ಕು ಪಥದ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಬೇಕು, ಕಲಬುರಗಿಯ ಇಎಸ್ಐಸಿ ಆಸ್ಪತ್ರೆಯನ್ನು ಎಐಐಎಂಎಸ್ ಆಗಿ ಮೇಲ್ದರ್ಜೆಗೆ ಏರಿಸಬೇಕು, ಕಲಬುರಗಿ ರೈಲ್ವೆ ವಿಭಾಗವನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿಸಿದರು. ಕಳೆದ ಹನ್ನೊಂದು ವರ್ಷಗಳಿಂದ ಕೇಂದ್ರ ಸರ್ಕಾರವು ಕಲ್ಯಾಣ ಕರ್ನಾಟಕ ಹಾಗೂ ವಿಶೇಷವಾಗಿ ಕಲಬುರಗಿಗೆ ಮಲತಾಯಿ ಧೋರಣೆ ತೋರಿದೆ ಎಂದು ಆರೋಪಿಸಿದರು.
2018ರ ಪಾರ್ಲಿಮೆಂಟರಿ ಅಕೌಂಟ್ಸ್ ಕಮಿಟಿ ವರದಿ, 2020ರ ಮದ್ರಾಸ್ ಹೈಕೋರ್ಟ್ ತೀರ್ಪು ಹಾಗೂ ನಂಜುಂಡಪ್ಪ ಸಮಿತಿ ವರದಿಯಂತೆ ಕಲಬುರಗಿಯಲ್ಲಿ ಏಮ್ಸ್ ಸ್ಥಾಪನೆಗೆ ಎಲ್ಲಾ ಸೌಲಭ್ಯಗಳಿದ್ದು, ಈಗಿರುವ ಇಎಸ್ಐಸಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದರೆ ಕೇಂದ್ರಕ್ಕೆ ಹೆಚ್ಚಿನ ಆರ್ಥಿಕ ಭಾರವಿಲ್ಲ ಎಂದು ತಿಳಿಸಿದರು.
ಜೇವರ್ಗಿ–ಲಿಂಗಸಗೂರು–ಬಳ್ಳಾರಿ, ಬೀದರ–ಕಲಬುರಗಿ–ವಿಜಯಪುರ, ಕಲಬುರಗಿ–ರಾಯಚೂರು ಮಾರ್ಗಗಳ ರಾಷ್ಟ್ರೀಯ ಹೆದ್ದಾರಿಗಳನ್ನು ಚತುಷ್ಪಥಗಳಾಗಿ ಅಭಿವೃದ್ಧಿಪಡಿಸಬೇಕು ಹಾಗೂ ಕಲಬುರಗಿ–ಲಾತೂರ ಹೊಸ ರೈಲು ಮಾರ್ಗಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಲಾಯಿತು. ಕಲಬುರಗಿ ವಿಮಾನ ಸಂಚಾರ ಪುನರಾರಂಭಕ್ಕೆ ಉಡಾನ್ ಯೋಜನೆಯನ್ನು ಹತ್ತು ವರ್ಷ ವಿಸ್ತರಿಸುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರವು ಬಜೆಟ್ಗೆ ಮುನ್ನ ಕೇಂದ್ರ ಸರ್ಕಾರದ ಬಳಿ ನಿಯೋಗ ಕಳುಹಿಸಿ ಕಲ್ಯಾಣ ಕರ್ನಾಟಕದ ಬೇಡಿಕೆಗಳನ್ನು ಬಲವಾಗಿ ಮಂಡಿಸಬೇಕೆಂದು ವೇದಿಕೆ ಆಗ್ರಹಿಸಿತು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ಎಸ್. ನಡಗೇರಿ, ಜಿಲ್ಲಾಧ್ಯಕ್ಷ ಬಾಬು ಮದನಕರ, ಜೈಭೀಮ್ ಮಾಳಗೆ, ಮೋಹನ ಸಾಗರ, ನಾಗು ಡೊಂಗರಗಾಂವ್, ದತ್ತು ಜಮಾದಾರ ಉಪಸ್ಥಿತರಿದ್ದರು.



