ಮಹಾಯೋಗಿ ವೇಮನರ ವಚನಗಳನ್ನು ಕೃತಿ ರೂಪದಲ್ಲಿ ಹೊರತರಲಿ: ಎಸ್.ಬಿ. ಕಾಮರೆಡ್ಡಿ

ಕಲಬುರಗಿ:ಮಹಾಯೋಗಿ ವೇಮನ ಅವರು ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಚಿಂತಕರಾಗಿದ್ದು, ಸಾವಿರಾರು ವಚನಗಳನ್ನು ರಚಿಸಿದ್ದಾರೆ. ಸರ್ಕಾರವು ಅವರ ವಚನಗಳನ್ನು ಸಂಗ್ರಹಿಸಿ ಕೃತಿ ರೂಪದಲ್ಲಿ ಪ್ರಕಟಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಕಲಬುರಗಿ ಜಿಲ್ಲಾ ರಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಎಸ್.ಬಿ. ಕಾಮರೆಡ್ಡಿ ಅವರು ಮನವಿ ಮಾಡಿದರು.
ನಗರದ ಜಿಲ್ಲಾ ರಡ್ಡಿ ಸಮಾಜದ ಕಚೇರಿಯಲ್ಲಿ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವಗಳಲ್ಲಿ ವೇಮನರು ನಂಬಿಕೆ ಇಟ್ಟುಕೊಂಡಿದ್ದರು. ಸಮಾಜದಲ್ಲಿ ತಾವು ಕಂಡ ಸತ್ಯವನ್ನು ಕಹಿಯಾದ ಭಾಷೆಯಲ್ಲಿ ಹಾಡುವ ಮೂಲಕ ಜನರಲ್ಲಿ ಅರಿವಿನ ಬೀಜ ಬಿತ್ತಿದರು. ತಮ್ಮ ತತ್ವಪದಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಮುನ್ನಡೆ ನೀಡಿದರು ಎಂದು ಹೇಳಿದರು.
ವೇಮನರ ತತ್ವ ಮತ್ತು ಸಿದ್ಧಾಂತಗಳು ಎಲ್ಲ ಸಮುದಾಯಗಳಿಗೂ ತಲುಪಬೇಕೆಂಬ ಉದ್ದೇಶದಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ‘ಮಹಾಯೋಗಿ ವೇಮನ ಅಧ್ಯಯನ ಪೀಠ’ ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್ ಹರವಾಳ, ಜಾನಪ್ಪ ಗೌಡ, ಪಲ್ಲಾ ರಡ್ಡಿ, ಮಹೇಶ್ ರಡ್ಡಿ, ಮಹೇಶ್ ಹೊಸೂರಕರ್, ಅನೂಪ ರಡ್ಡಿ, ಡಾ. ಎಸ್.ಎಲ್. ಪಾಟೀಲ್, ಸಿದ್ದಾರೆಡ್ಡಿ, ಡಾ. ಸಿದ್ದರಾಮ ಗಲ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



