ಗಂಗಾವತಿ| SC ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಅವ್ಯವಸ್ಥೆ ಆರೋಪ

ಗಂಗಾವತಿ:ಇಲ್ಲಿನ SC ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುವಂತಹ ಕ್ರಮಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಅನಾರೋಗ್ಯ ಹಾಗೂ ಮಾಸಿಕ ಧರ್ಮ ಸೇರಿದಂತೆ ಅನಿವಾರ್ಯ ಕಾರಣಗಳಿಂದ ಶಾಲೆಗೆ ಹಾಜರಾಗದ ವಿದ್ಯಾರ್ಥಿನಿಯರಿಗೆ ವಸತಿ ನಿಲಯದಲ್ಲೇ ಇದ್ದರೂ ಮಧ್ಯಾಹ್ನದ ಊಟ ನೀಡಲಾಗುತ್ತಿಲ್ಲ ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಯಮುನಾ ಚಳ್ಳೂರು ಆರೋಪಿಸಿದ್ದಾರೆ.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಒದಗಿಸುವುದು ಆಡಳಿತದ ಕಡ್ಡಾಯ ಕರ್ತವ್ಯವಾಗಿದ್ದು, ಇದನ್ನು ನಿರಾಕರಿಸುವುದು ಸಂವಿಧಾನಾತ್ಮಕ ಹಕ್ಕುಗಳ ಉಲ್ಲಂಘನೆಗೆ ಸಮಾನವಾಗಿದೆ ಎಂದು ಅವರು ಹೇಳಿದ್ದಾರೆ. ಭಾರತೀಯ ಸಂವಿಧಾನದ ಆರ್ಟಿಕಲ್ 21 ಹಾಗೂ 21ಎ, ಮಕ್ಕಳ ಹಕ್ಕುಗಳ ಸಂರಕ್ಷಣಾ ತತ್ವಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ವಿದ್ಯಾರ್ಥಿಗಳಿಗೆ ಆಹಾರ, ಆರೋಗ್ಯ ಹಾಗೂ ಸುರಕ್ಷಿತ ವಸತಿ ವ್ಯವಸ್ಥೆ ಒದಗಿಸಬೇಕಾಗಿದೆ.
ಇದಲ್ಲದೆ, ಹಳೆಯ ವಸತಿ ನಿಲಯದಲ್ಲಿ ಜಾಗದ ಕೊರತೆಯ ಹಿನ್ನೆಲೆ ಮತ್ತೊಂದು ಕಟ್ಟಡವನ್ನು ವಸತಿ ನಿಲಯವಾಗಿ ಬಳಸಿಕೊಳ್ಳಲಾಗಿದ್ದರೂ, ವಿದ್ಯಾರ್ಥಿನಿಯರನ್ನು ಶಾಲೆಯಿಂದ ನೇರವಾಗಿ ಹೊಸ ಕಟ್ಟಡಕ್ಕೆ ಕಳುಹಿಸದೇ ಮೊದಲು ಹಳೆಯ ವಸತಿ ನಿಲಯಕ್ಕೆ ಕರೆಸಿ, ರಾತ್ರಿ 8.30ರಿಂದ 9 ಗಂಟೆಯೊಳಗೆ ಊಟದ ನಂತರ ಹೊಸ ವಸತಿ ನಿಲಯಕ್ಕೆ ಕಳುಹಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿನಿಯರಿಗೆ ಅಧ್ಯಯನ, ಹೋಂವರ್ಕ್ ಹಾಗೂ ಸಮರ್ಪಕ ವಿಶ್ರಾಂತಿಗೆ ಅಡಚಣೆ ಉಂಟಾಗಿದೆ ಎಂಬುದು ಆರೋಪವಾಗಿದೆ.
ವಸತಿ ನಿಲಯಗಳು ಮಕ್ಕಳ ಕಲ್ಯಾಣ ಮತ್ತು ಶಿಕ್ಷಣದ ಕೇಂದ್ರಗಳಾಗಬೇಕೇ ಹೊರತು, ವಿದ್ಯಾರ್ಥಿನಿಯರನ್ನು ದೈಹಿಕ ಮತ್ತು ಮಾನಸಿಕ ಕಷ್ಟಗಳಿಗೆ ಒಳಪಡಿಸುವ ಸ್ಥಳಗಳಾಗಬಾರದು ಎಂದು ಯಮುನಾ ಚಳ್ಳೂರು ತಿಳಿಸಿದ್ದಾರೆ. ಈ ಕುರಿತು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಡಳಿತ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗಳನ್ನು ಪರಿಹರಿಸಬೇಕು; ಇಲ್ಲವಾದಲ್ಲಿ ವಿದ್ಯಾರ್ಥಿನಿಯರ ಹಕ್ಕುಗಳ ರಕ್ಷಣೆಗೆ ಕಾನೂನು ಮತ್ತು ಸಾಮಾಜಿಕ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.




